ಪೂರ್ಣಿಮಾ ರವಿ ನಿರ್ದೇಶನದ ‘ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್’ ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭ

ಉಜಿರೆ: ಇಲ್ಲಿನ ಎಸ್ ಡಿಎಂ ಸ್ವಾಯತ್ತ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ಹಿರಿಯ ವಿದ್ಯಾರ್ಥಿನಿ ಪೂರ್ಣಿಮಾ ರವಿ ನಿರ್ದೇಶನದ ದೇವದಾಸಿ ಕುರಿತ ಸಾಕ್ಷ್ಯಚಿತ್ರ “ಗಾಡ್ಸ್ ವೈವ್ಸ್ ಮೆನ್ಸ್ ಸ್ಲೇವ್ಸ್” ಭಾನುವಾರದಂದು ಬಿಡುಗಡೆಗೊಂಡಿತು.

ಕಾರ್ಯಕ್ರಮವನ್ನು ಗಾಂಧಿಯನ್ ಇನ್ಸ್ಟಿಟ್ಯೂಟ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಮತ್ತು ಸೈನ್ಸಸ್ ಸಂಸ್ಥೆ ನಿರ್ದೇಶಕ ಪ್ರೊ. ವರದೇಶ್ ಹಿರೇಗಂಗೆ ಉದ್ಘಾಟಿಸಿ ಮಾನಸಿಕ ಬದಲಾವಣೆಯೊಂದಿಗೆ ಸಾಮಾಜಿಕ ಪರಿವರ್ತನೆಯ ಮಾಧ್ಯಮವಾಗಿ ಸಂಶೋಧನೆಗಳು ನಡೆಯಬೇಕು. ಡಾಕ್ಟರೇಟ್ ಪದವಿ ಅಥವಾ ಜ್ಞಾನಪ್ರಾಪ್ತಿಗಾಗಿ ಮಾಡಿದ ಸಂಶೋಧನಾ ಪ್ರಬಂಧಗಳು ಕಪಾಟಿನಲ್ಲಿರುತ್ತವೆ. ಆದರೆ ಪೂರ್ಣಿಮಾ ರವಿ
ಇದ್ದಕ್ಕಿಂದ ಭಿನ್ನವಾಗಿ ಉಪೇಕ್ಷಿತ ದೇವದಾಸಿಯರ ಬದುಕಿನ ಬವಣೆ, ಸಮಸ್ಯೆ ಮತ್ತು ಸವಾಲುಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ, ಸಮಗ್ರ ಮಾಹಿತಿ ಕಲೆಹಾಕಿ ಸಂಶೋಧನೆಯಿಂದ ಅವರ ಬದುಕಿನಲ್ಲಿ ಧನಾತ್ಮಕ ಪರಿಣಾಮ ಉಂಟಾಗಿ ಸಮಾಜದಲ್ಲಿ ಅವರ ಬಗ್ಗೆ ಸದಭಿಪ್ರಾಯ ಮೂಡಬೇಕೆನ್ನುವ ಉದ್ದೇಶದಿಂದ ಸಾಕ್ಷ್ಯ ಚಿತ್ರ ತಯಾರಿಸಿದ್ದಾರೆ ಎಂದರು.

ಸಾಕ್ಷ್ಯಚಿತ್ರಕ್ಕಾಗಿ ಪೂರ್ಣಿಮಾ ರವಿ ಮತ್ತು ಬಳಗದವರನ್ನು ಅಭಿನಂದಿಸಲಾಯಿತು.

ಹೊಸಪೇಟೆ ವಿಜಯನಗರ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರಶೇಖರ ಶಾಸ್ತ್ರಿ, ಮಹಿಳಾ ವಿಮೋಚನಾ ಸಂಘದ ಅಧ್ಯಕ್ಷರಾದ ವಿ. ರೇಣುಕಮ್ಮ ಉಪಸ್ಥಿತರಿದ್ದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಚ ಸ್ವಾಗತಿಸಿ, ಪೂರ್ಣಿಮಾ ರವಿ ವಂದಿಸಿ, ಡಾ. ಗೋವಿಂದ ಪ್ರಸಾದ್ ಕಜೆ ಕಾರ್ಯಕ್ರಮ ನಿರೂಪಿಸಿದರು.