ಶಿರ್ವ ಸಹಕಾರಿ ವ್ಯವಸಾಯಿಕ ಸಂಘ ನೂತನ ಹವಾನಿಯಂತ್ರಿತ ಪ್ರಧಾನ ಕಚೇರಿ ಮತ್ತು ಎಂ.ಎಸ್.ಸಿ ಗೋದಾಮು ಉದ್ಘಾಟನೆ

ಕಾಪು: ಶಿರ್ವ ಸಹಕಾರಿ ವ್ಯವಸಾಯಿಕ ಸಂಘ, (ನಿ.) ಇದರ ನೂತನ ಹವಾನಿಯಂತ್ರಿತ ಪ್ರಧಾನ ಕಚೇರಿ ಮತ್ತು ಎಂ.ಎಸ್.ಸಿ ಗೋದಾಮಿನ ಉದ್ಘಾಟನಾ ಕಾರ್ಯಕ್ರಮವು ಸೆ. 30 ರಂದು ಜರುಗಿತು.

ಭದ್ರತಾ ಕೊಠಡಿಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸಾರ್ವಜನಿಕ ವಲಯದಲ್ಲಿ ಅತ್ಯಂತ ಯಶಸ್ವಿ ಕ್ಷೇತ್ರವೆಂದರೆ ಸಹಾಕಾರಿ ರಂಗ. ಅವಿಭಜಿತ ದ.ಕ ಜಿಲ್ಲೆಯ ಸಹಕಾರಿ ಕ್ಷೇತ್ರದ ಉನ್ನತಿಗಾಗಿ ದಶಕಗಳ ಹಿಂದೆಯೇ ಶ್ರಮಿಸಿದ ಮೊಳಹಳ್ಳಿ ಸುಬ್ರಹ್ಮಣ್ಯ ಭಟ್, ಟಿ.ಎಂ.ಎ ಪೈ, ಕರಂಬಳ್ಳಿ ಸಂಜೀವ ಶೆಟ್ಟಿ, ಜಿ.ಎಸ್ ಆಚಾರ್ಯ ಮುಂತಾದವರ ಕೊಡುಗೆ ಅಪಾರ. ಅವರು ಹಾಕಿಕೊಟ್ಟ ದಾರಿ, ನೀಡಿದ ಮಾರ್ಗದರ್ಶನ, ಅನುಸರಿಸಿದ ನೀತಿ ಇಂದಿನ ಸಮಾಜಕ್ಕೆ ದಾರಿದೀಪ. ಪಕ್ಷ, ಜಾತಿ, ಧರ್ಮವನ್ನು ಮೀರಿ ಮಾನವೀಯವಾಗಿ ಸ್ಪಂದಿಸುವ ಗುಣದೊಂದಿಗೆ ರಾಜಕೀಯ ರಹಿತ ಪ್ರಮಾಣಿಕ ಸಮಾಜಮುಖಿ ಸೇವೆ ನೀಡುವಲ್ಲಿ ನಾವೆಲ್ಲರೂ ಜೊತೆಯಾಗಿ ಶ್ರಮಿಸೋಣ ಎಂದರು.

ಶಿರ್ವ ಸಹಕಾರಿ ವ್ಯವಸಾಯಿಕ ಸಂಘ ನಿ. ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ನಿ.) ಮಂಗಳೂರು ಹಾಗೂ ಕರ್ನಾಟಕ ರಾಜ್ಯ ಸರಕಾರ ಮಾರಾಟ ಮಹಾ ಮಂಡಲ (ನಿ.) ಬೆಂಗಳೂರು ಇದರ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರ ಕುಮಾರ್, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ (ನಿ.) ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಉಡುಪಿ ಜಿಲ್ಲಾ ಸಹಕಾರ ಭಾರತಿ ಅಧ್ಯಕ್ಷ ಬೋಳ ಸದಾಶಿವ ಶೆಟ್ಟಿ, ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ರಾಜೇಶ್, ಸಂಘದ ಪದಾಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.