ಮಣಿಪಾಲ: ಜೀವನ್ಮರಣ (ಪ್ರಾಣಾಂತಿಕ)ಸ್ಥಿತಿಯಲ್ಲಿರುವ ರೋಗಿಗಳ ಪ್ರಶಾಮಕ ಆರೈಕೆ ಕೇಂದ್ರದ ಉದ್ದೇಶಿತ ಉದಾತ್ತ ಆಶಯದೊಂದಿಗೆ 6 ನೆಯ ಮಣಿಪಾಲ್ ಮ್ಯಾರಥಾನ್ ಅನ್ನು 2024 ರ ಫೆಬ್ರವರಿ 11 ರಂದು ಆಯೋಜಿಸಲಾಗುವುದು ಎಂದು ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾಹಿತಿ ನೀಡಿದರು.
ಅವರು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಲದ ಮ್ಯಾರಥಾನ್ ‘ಜೀವನ್ಮರಣ (ಪ್ರಾಣಾಂತಿಕ)ಕಾಯಿಲೆಯನ್ನು ಅನುಭವಿಸುತ್ತಿರುವ ರೋಗಿಗಳಿಗೆ ಪ್ರಶಾಮಕ ಆರೈಕೆ ಕೇಂದ್ರ [ಹಾಸ್ಪಿಸ್ ಕೇರ್] ಎಂಬ ಉದಾತ್ತ ಆಶಯವನ್ನು ಹೊಂದಿದೆ. ‘ನಾವು ನಿಮ್ಮ ಜೊತೆ ಸದಾ ಇದ್ದೇವೆ’ ಎಂಬುದು ಈ ಸಲದ ಘೋಷವಾಕ್ಯವಾಗಿದೆ. ಈ ಮ್ಯಾರಥಾನ್‌ನಲ್ಲಿ ಭಾಗವಹಿಸಲು ಜಗತ್ತಿನ ವಿವಿಧ ಭಾಗಗಳಿಂದ ಆಸಕ್ತರು ಆಗಮಿಸುತ್ತಿದ್ದು ಉದಾತ್ತ ಆಶಯಕ್ಕಾಗಿ ಸಾಂಸ್ಕೃತಿಕ ಎಲ್ಲೆಗಳನ್ನು ಮೀರಿದ ಸಂವೇದನಾಶೀಲ ಮತ್ತು ಉತ್ಸವದ ವಾತಾವರಣವನ್ನು ಉಂಟುಮಾಡಲಿದ್ದಾರೆ.
ವಿವಿಧ ಹರೆಯದ ಸುಮಾರು 15,000 ಮಂದಿ ಈ ಮ್ಯಾರಥಾನ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಈ ಹಿಂದಿನ ಮ್ಯಾರಥಾನ್‌ನ ಆವೃತ್ತಿಗಳಲ್ಲಿ ಇಥಿಯೋಪಿಯಾ, ಕೀನ್ಯಾ, ಇಂಗ್ಲೆಂಡ್, ನೇಪಾಲ, ಮೆಲೇಶ್ಯಾ, ಅಮೆರಿಕ ಮತ್ತು ಶ್ರೀಲಂಕಾದಿಂದ ಆಸಕ್ತರು ಆಗಮಿಸಿದ್ದರು. ಮುಂಬರುವ 2024 ರ ಮ್ಯಾರಥಾನ್ ಇನ್ನೂ ಹೆಚ್ಚಿನ ಅಂತಾರಾಷ್ಟ್ರೀಯ ಪ್ರತಿಭೆಗಳನ್ನು ಆಕರ್ಷಿಸುವ ಭರವಸೆಯನ್ನು ಹೊಂದಿದೆ.
ಸಮಾಜದ ಮೇಲೆ ಧನಾತ್ಮಕ ಪರಿಣಾಮ ಬೀರುವ ಬದ್ದತೆಯನ್ನು ಹೊಂದಿರುವ, ಕ್ರೀಡಾಮನೋಭಾವದ ಉತ್ಸಾಹಿಗಳನ್ನು ಒಂದಾಗಿಸುವ ಈ ರೋಮಾಂಚಕ ಕಾರ್ಯಕ್ರಮದ ನೋಂದಣಿಗಾಗಿ ಭೇಟಿ ನೀಡಿ: www.manipalmarathon.in (ಅಕ್ಟೋಬರ್ 15 ರಿಂದ ನೋಂದಣಿ ಪ್ರಾರಂಭವಾಗುತ್ತದೆ)
ಆಕರ್ಷಕ ನಗದು ಬಹುಮಾನ, ಉತ್ಸವದ ವಾತಾವರಣ, ಸ್ವಾದಿಷ್ಟ ತಿನಿಸುಗಳು, ಉತ್ಕೃಷ್ಟವಾದ ಮ್ಯಾರಥಾನ್ ಸಲಕರಣೆಗಳು ಸೇರಿದಂತೆ ಮಣಿಪಾಲ್ ಮ್ಯಾರಥಾನ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ.
ಪತ್ರಿಕಾಗೋಷ್ಠಿಯಲ್ಲಿ (ಮಾಹೆ) ಮಣಿಪಾಲದ ಉಪಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ.)
ಎಂ. ಡಿ. ವೆಂಕಟೇಶ್ ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್ ನ ಗೌರವ ಸಲಹೆಗಾರ ಕೆ ರಘುಪತಿ ಭಟ್, ಕೆ.ಎಂ.ಸಿ ಅಸೋಸಿಯೇಟ್ ಡೀನ್ ಡಾ. ನವೀನ್ ಸಾಲಿನ್ಸ್, ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಮಹೇಶ್ ಠಾಕೂರ್, ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಕೆಂಪರಾಜ್ ಉಪಸ್ಥಿತರಿದ್ದರು.
ಮಾಹೆಯ ಕ್ರೀಡಾಮಂಡಳಿಯ ಕಾರ್ಯದರ್ಶಿ ಡಾ. ವಿನೋದ್ ನಾಯಕ್ ಸ್ವಾಗತಿಸಿ, ಮೋನಿಕಾ ಜಾಧವ್ ವಂದಿಸಿದರು.