ಪ್ರಧಾನಿ ಮೋದಿ ಗಾಂಧಿ ಜಯಂತಿಗೂ ಮುನ್ನ ಸ್ವಚ್ಛತಾ ಅಭಿಯಾನಕ್ಕೆ ಕರೆ

ನವದೆಹಲಿ: ಸ್ವಚ್ಛ ಭಾರತ್ ಅಭಿಯಾನ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.ಅಕ್ಟೋಬರ್ 1 ರಂದು ಸ್ವಚ್ಛತೆಯ ಬಗ್ಗೆ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗುವುದು. ಸ್ವಚ್ಛ ಭಾರತ ಅಭಿಯಾನವು ನಮ್ಮ ಜವಾಬ್ದಾರಿಯಾಗಿದೆ. ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.ಅಕ್ಟೋಬರ್ 1 ರಂದು ಬೆಳಗ್ಗೆ 10 ಗಂಟೆಗೆ ಪ್ರಾರಂಭವಾಗುವ ಸ್ವಚ್ಛತಾ ಅಭಿಯಾನದಲ್ಲಿ ದೇಶಾದ್ಯಂತ ಜನರು ಭಾಗವಹಿಸಬೇಕು.

 

ಅಕ್ಟೋಬರ್ 1ರಂದು ಬೆಳಗ್ಗೆ 10 ಗಂಟೆಗೆ, ನಾವು ಒಂದು ಪ್ರಮುಖ ಸ್ವಚ್ಛತೆಯ ಉಪಕ್ರಮಕ್ಕಾಗಿ ಒಗ್ಗೂಡುತ್ತೇವೆ. ಸ್ವಚ್ಛ ಭಾರತವು ಹಂಚಿಕೆಯ ಜವಾಬ್ದಾರಿಯಾಗಿದ್ದು, ಪ್ರತಿ ಪ್ರಯತ್ನವು ಮಹತ್ವದಿಂದ ಕೂಡಿರುತ್ತದೆ. ಸ್ವಚ್ಛ ಭವಿಷ್ಯ ರೂಪಿಸಲು ಈ ಉದಾತ್ತ ಪ್ರಯತ್ನಕ್ಕೆ ಸೇರಿಕೊಳ್ಳಿ ಎಂದು ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

 

ವಿವಿಧೆಡೆ ಸ್ವಚ್ಛತಾ ಕಾರ್ಯಕ್ರಮ: ಪ್ರತಿ ಪಟ್ಟಣ, ಗ್ರಾಮ ಪಂಚಾಯತ್, ನಾಗರಿಕ ವಿಮಾನಯಾನ, ರೈಲ್ವೆ ಮತ್ತು ಸಾರ್ವಜನಿಕ ಸಂಸ್ಥೆಗಳಂತಹ ಸರ್ಕಾರದ ಎಲ್ಲಾ ಕ್ಷೇತ್ರಗಳು ನಾಗರಿಕರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮಗಳು ನಡೆಯಲಿವೆ. ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪೂರಕವಾಗಿ ವಿಶೇಷ ಪೋರ್ಟಲ್ ಅನ್ನು ಸ್ಥಾಪಿಸಲಾಗಿದೆ. ಈ ಪೋರ್ಟಲ್ ಪ್ರಭಾವಿಗಳು ಮತ್ತು ನಾಗರಿಕರನ್ನು ಸ್ವಚ್ಛತಾ ರಾಯಭಾರಿಗಳಾಗಿ ಈ ಜನಾಂದೋಲನಕ್ಕೆ ಸೇರಲು ಆಹ್ವಾನಿಸುತ್ತದೆ. ಜನರು ತಮ್ಮ ಉಪಸ್ಥಿತಿಯನ್ನು ಗುರುತಿಸಲು ಚಿತ್ರಗಳನ್ನು ಕ್ಲಿಕ್ ಮಾಡಬಹುದು. ಜೊತೆಗೆ ಅವುಗಳನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಬಹುದು.

 

‘ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್’ ಅಭಿಯಾನ: ಈ ಹಿಂದೆ, ಮನ್ ಕಿ ಬಾತ್‌ನ 105ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಅವರು, ಅಕ್ಟೋಬರ್ 1 ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ಸ್ವಚ್ಛತೆಯ ಬಗ್ಗೆ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗುವುದು. ನೀವು ಕೂಡ ಸಮಯ ವಿನಿಯೋಗಿಸಿ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ಈ ಅಭಿಯಾನಕ್ಕೆ ಸಹಾಯ ಮಾಡಿ. ನಿಮ್ಮ ಬೀದಿಯಲ್ಲಿ ಅಥವಾ ನೆರೆಹೊರೆಯಲ್ಲಿ ಅಥವಾ ಉದ್ಯಾನ, ನದಿ, ಸರೋವರ ಅಥವಾ ಯಾವುದೇ ಇತರ ಸಾರ್ವಜನಿಕ ಸ್ಥಳದಲ್ಲಿ ನೀವು ಈ ಸ್ವಚ್ಛತಾ ಅಭಿಯಾನದಲ್ಲಿ ಸಹ ಸೇರಿಕೊಳ್ಳಬಹುದು ಎಂದು ಮೋದಿ ತಿಳಿಸಿದ್ದಾರೆ.

 

‘ಏಕ್ ತಾರೀಖ್, ಏಕ್ ಘಂಟಾ, ಏಕ್ ಸಾಥ್’ ಅಭಿಯಾನವು ಗಾಂಧಿ ಜಯಂತಿಯ ಆಚರಣೆಯನ್ನು ಗುರುತಿಸಲು ಒಂದು ಮೆಗಾ ಸ್ವಚ್ಛತಾ ಅಭಿಯಾನವಾಗಿದೆ. ಈ ಉಪಕ್ರಮವು ‘ಸ್ವಚ್ಛತಾ ಪಖ್ವಾಡ – ಸ್ವಚ್ಛತಾ ಹಿ ಸೇವಾ’ 2023 ಅಭಿಯಾನಕ್ಕೆ ಚಾಲನೆಯಾಗಿದೆ. ಎಲ್ಲ ನಾಗರಿಕರಿಂದ ಅಕ್ಟೋಬರ್ 1 ರಂದು ಬೆಳಿಗ್ಗೆ 10 ಗಂಟೆಗೆ ‘ಸ್ವಚ್ಛತೆಗಾಗಿ ಶ್ರಮದಾನ’ ನಡೆಯಲಿದೆ.