ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್​ನಲ್ಲಿ ಭಾರತಕ್ಕೆ ಗೆಲುವಿನ ಆರಂಭ: ಬಿಡಬ್ಲ್ಯುಎಫ್

ಸ್ಪೋಕೇನ್ (ಯುಎಸ್‌ಎ): ಅಮೆರಿಕದ ಸ್ಪೋಕೇನ್‌ನಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನ ಮಿಶ್ರ ಟೀಮ್ ಈವೆಂಟ್‌ನಲ್ಲಿ ಭಾರತೀಯ ಶಟ್ಲರ್‌ಗಳು ಕುಕ್ ಐಲ್ಯಾಂಡ್ಸ್ ವಿರುದ್ಧ 5-0 ಅಂತರದಿಂದ ಗೆಲುವು ಸಾಧಿಸಿದ್ದಾರೆ.ಮಿಶ್ರ ಡಬಲ್ಸ್ ಜೋಡಿ ಸಾಥ್ವಿಕ್ ರೆಡ್ಡಿ ಕಾನಪುರಂ ಮತ್ತು ವೈಷ್ಣವಿ ಖಡ್ಕೇಕರ್ ಭಾರತಕ್ಕೆ ಗೆಲುವಿನ ಆರಂಭವನ್ನು ಮಾಡಿದರು. ಕುಕ್ ದ್ವೀಪದ ಕೈಯಿನ್ ಮಟಾಯೊ ಮತ್ತು ತೆರೆಪಿ ಅಕಾವಿ ಅವರನ್ನು 21-6, 21-8ರ ನೇರ ಸೆಟ್ ಭಾರಿ ಅಂತರಿಂದ ಸೋಲಿಸಿದರು.
ಇತ್ತೀಚಿನ ವರ್ಷಗಳಲ್ಲಿ ಭಾರತ ಸರ್ವ ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬರುತ್ತಿದೆ. ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್​ನಲ್ಲೂ ಭಾರತದ ಯುವ ಪ್ರತಿಭೆಗಳು ಗೆಲುವು ದಾಖಲಿಸಿದ್ದಾರೆ.

ಆಯುಷ್ ಶೆಟ್ಟಿ ಮತ್ತು ತಾರಾ ಶಾ ತಮ್ಮ ತಮ್ಮ ಸಿಂಗಲ್ಸ್ ಪಂದ್ಯಗಳಲ್ಲಿ ಪ್ರಬಲ ಪ್ರದರ್ಶನದೊಂದಿಗೆ ಭಾರತದ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿದರು. ಬಾಲಕರ ಸಿಂಗಲ್ಸ್ ಪಂದ್ಯದಲ್ಲಿ, ಆಯುಷ್ ತನ್ನ ಕೌಶಲ್ಯವನ್ನು ಪ್ರದರ್ಶಿಸಿ ಡೇನಿಯಲ್ ಅಕಾವಿ ವಿರುದ್ಧ 21-6, 21-3 ರಿಂದ ಮಣಿಸಿದರು. ಹುಡುಗಿಯರ ಸಿಂಗಲ್ಸ್‌ನಲ್ಲಿ ತಾರಾ ತಮ್ಮ ಕ್ಲಾಸ್​ ಪ್ರದರ್ಶನವನ್ನು ನೀಡಿದರು. ಟೆ ಪಾ ಒ ಟೆ ರಂಗಿ ತುಪಾ ಅವರನ್ನು 21-3, 21-6 ರಿಂದ ಕೇವಲ 14 ನಿಮಿಷಗಳಲ್ಲಿ ಸೋಲಿಸಿದರು.

ಭಾರತವು ಡೊಮಿನಿಕನ್ ರಿಪಬ್ಲಿಕ್ ವಿರುದ್ಧ ವಾಕ್ ಓವರ್ ಪಡೆದಿದೆ ಮತ್ತು ಮುಂದಿನ ಎರಡು ಗುಂಪಿನ ಡಿ ಪಂದ್ಯಗಳಲ್ಲಿ ಬ್ರೆಜಿಲ್ ಮತ್ತು ಜರ್ಮನಿಯನ್ನು ಎದುರಿಸಲಿದೆ. ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) 16 ಜನ ಸದಸ್ಯರನ್ನು ಸ್ಪರ್ಧೆಗೆ ಕಳುಹಿಸಿದೆ. ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ ಅಕ್ಟೋಬರ್ 8 ರಂದು ಮುಕ್ತಾಯಗೊಳ್ಳಲಿದೆ.

ನಂತರ, ಬಾಲಕರ ಡಬಲ್ಸ್ ಪಂದ್ಯದಲ್ಲಿ ನಿಕೋಲಸ್ ಮತ್ತು ತುಷಾರ್ ಜೋಡಿ 21-9 21-5 ಅಂಕಗಳೊಂದಿಗೆ ಇಮ್ಯಾನುಯೆಲಾ ಮಟಾಯೊ ಮತ್ತು ಕೈಯಿನ್ ಮಟಾಯೊ ಅವರನ್ನು ಸೋಲಿಸಿದರು. ಬಾಲಕಿಯರ ಡಬಲ್ಸ್ ಜೋಡಿ ರಾಧಿಕಾ ಶರ್ಮಾ ಮತ್ತು ತನ್ವಿ ಶರ್ಮಾ ಅವರು ಅತ್ಯುತ್ತಮ ಸಾಂಘಿಕ ಪ್ರದರ್ಶನವನ್ನು ಪ್ರದರ್ಶಿಸಿ ಟೆರಿಯಾಪಿ ಅಕಾವಿ ಮತ್ತು ವೈಟಿಯಾ ಕ್ರೊಕೊಂಬೆ-ಅಮಾ ವಿರುದ್ಧ 21-4, 21-7 ಅಂತರದಲ್ಲಿ ಗೆದ್ದು ಬೀಗಿದರು.