ಇಸ್ತಾಂಬುಲ್: ಮಕ್ಕಳ ಭವಿಷ್ಯಕ್ಕೆ ಮಾರಕವಾಗುವ ಪೋಲಿಯೋ ವೈರಸ್ ನಿರ್ಮೂಲನೆಗೆ ವಿಶ್ವಸಂಸ್ಥೆ ಪಣತೊಟ್ಟಿದ್ದು, ಇದಕ್ಕಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ನಡುವೆ ಪಾಕಿಸ್ತಾನದ ಕೊಳಚೆಯಲ್ಲಿ ವೈಲ್ಡ್ ಪೋಲಿಯೋ ವೈರಸ್ ಟೈಪ್ 1 ಮಾದರಿ ಪತ್ತೆಯಾಗಿದೆ. ಪಾಕಿಸ್ತಾನದ ಎರಡು ವಿಭಿನ್ನ ಭಾಗದಲ್ಲಿ ಕೊಳಚೆ ನೀರಿನಲ್ಲಿ ಇದರ ಸುಳಿವು ಕಂಡುಬಂದಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.ಐದು ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಈ ಸೋಂಕು ಅವರಲ್ಲಿ ನರ ಸಮಸ್ಯೆ ಮತ್ತು ಶಾಶ್ವತ ಅಂಗವೈಕಲ್ಯತೆಗೆ ದೂಡುತ್ತದೆ.
ಅಕ್ಟೋಬರ್ನಿಂದ ಲಸಿಕೆ ಅಭಿಯಾನ: ಪಾಕಿಸ್ತಾನದಲ್ಲಿ ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಿಕೆ ಕಾರ್ಯದ ಅಭಿಯಾನ ಅಕ್ಟೋಬರ್ 2ರಿಂದ ಆರಂಭವಾಗಲಿದ್ದು, 40 ಮಿಲಿಯನ್ ಮಕ್ಕಳಿಗೆ ಪೋಲಿಯೋ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಈ ವೇಳೆ ಕರಾಚಿ ಮತ್ತು ಹಂಗು ಪ್ರದೇಶದ ಎಲ್ಲಾ ಮಕ್ಕಳಿಗೂ ಕೂಡ ಪೋಲಿಯೋ ಲಸಿಕೆ ಹಾಕಲಾಗುವುದು ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪರಿಸರದಲ್ಲಿ ಪೋಲಿಯೋ ವೈರಸ್ ಪತ್ತೆಯಾಗಿರುವುದು ಅತ್ಯಂತ ಕಾಳಜಿ ವಿಷಯವಾಗಿದ್ದು, ಇದು ಪಾಕಿಸ್ತಾನ ಪೋಲಿಯೋ ಕಾರ್ಯಕ್ರಮದ ಕಣ್ಗಾವಲು ವ್ಯವಸ್ಥೆಯ ದಕ್ಷತೆಯನ್ನು ಎತ್ತಿ ತೋರಿಸುತ್ತದೆ.ಸೆಪ್ಟೆಂಬರ್ 5 ರಂದು ಕರಾಚಿಯ ದಕ್ಷಿಣ ಬಂದರು ನಗರದಲ್ಲಿ ಕೊಳಚೆ ನೀರಿನಲ್ಲಿ ಈ ಮಾದರಿಯನ್ನು ಸಂಗ್ರಹಿಸಲಾಗಿದೆ. ಮತ್ತೊಂದನ್ನು ಹಂಗು ಜಿಲ್ಲೆಯಲ್ಲಿ ಪತ್ತೆ ಮಾಡಲಾಗಿದ್ದು, ಎರಡರ ಪರೀಕ್ಷೆ ನಡೆಸಿದಾಗ ಪಾಸಿಟಿವ್ ವರದಿ ಬಂದಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಪೋಲಿಯೋ ಸೋಂಕಿನ ವಿರುದ್ಧ ಜಾಗತಿಕ ಹೋರಾಟದಲ್ಲಿ ಯಶಸ್ಸು ಕಂಡಿದೆಯಾದರೂ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನ ಎರಡು ದೇಶಗಳು ಮಾತ್ರ ಇದರಿಂದ ಮುಕ್ತವಾಗಿಲ್ಲ. ಇದರ ವಿರುದ್ಧ ಇನ್ನೂ ಹೋರಾಟ ನಡೆಸುತ್ತಿವೆ. ಈ ವರ್ಷ ಅಫ್ಘಾನಿಸ್ತಾನದಲ್ಲಿ ಐದು ಪೋಲಿಯೋ ಪ್ರಕರಣ ಪತ್ತೆಯಾಗಿದ್ದು, 33 ಪರಿಸರ ಮಾದರಿ ಪ್ರಕರಣಗಳು ದಾಖಲಾಗಿವೆ.
ಈ ವರ್ಷ ಪಾಕಿಸ್ತಾನದಲ್ಲಿ ಎರಡು ಪೋಲಿಯೋ ಪ್ರಕರಣಗಳು ದಾಖಲಾಗಿವೆ. ಇದರ ಜೊತೆಗೆ 27 ಪಾಸಿಟಿವ್ ಪ್ರಕರಣಗಳು ಪರಿಸರದ ಮಾದರಿಯಲ್ಲಿ ಪತ್ತೆಯಾಗಿವೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಆರೋಗ್ಯ ಸಚಿವರಾದ ನದೀಪ್ ಜಾನ್, ಮಕ್ಕಳಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ನಾವು ದೇಶಾದ್ಯಂತ ಪೋಲಿಯೋ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುತ್ತಿದ್ದೇವೆ. ಐದು ವರ್ಷದ ಮಕ್ಕಳಿಗೆ ಲಸಿಕೆ ಕೊಡಿಸುವಲ್ಲಿ ಪೋಷಕರು ಮುಂದಾಗಬೇಕು. ಅವರು ನಿಯಮಿತ ಲಸಿಕೆಯನ್ನು ಕೂಡ ಪಡೆಯಬೇಕು ಎಂದಿದ್ದಾರೆ.