2024ಕ್ಕೆ ಜಿಮೇಲ್​​ನಲ್ಲಿನ ಬೇಸಿಕ್ HTML ಆವೃತ್ತಿ ಸ್ಥಗಿತ : ಗೂಗಲ್ ಘೋಷಣೆ

ಸ್ಯಾನ್ ಫ್ರಾನ್ಸಿಸ್ಕೋ : ಗೂಗಲ್ ತನ್ನ ಜಿಮೇಲ್ ಸೇವೆಯ ಬೇಸಿಕ್ ಎಚ್​ಟಿಎಂಎಲ್ ಆವೃತ್ತಿಯನ್ನು (Basic HTML version) 2024 ರ ಜನವರಿಯಲ್ಲಿ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. “ನೀವು ಜನವರಿ 2024 ರವರೆಗೆ ನಿಮ್ಮ ಬ್ರೌಸರ್​ನಲ್ಲಿ ಬೇಸಿಕ್ ಎಚ್​ಟಿಎಂಎಲ್​ ಆವೃತ್ತಿಯನ್ನು ನೋಡಬಹುದು. ಈ ದಿನಾಂಕದ ನಂತರ ಜಿಮೇಲ್ ಸ್ವಯಂಚಾಲಿತವಾಗಿ ಸ್ಟ್ಯಾಂಡರ್ಡ್ ಆವೃತ್ತಿಗೆ ಬದಲಾಗುತ್ತದೆ” ಎಂದು ಗೂಗಲ್ ಹೇಳಿದೆ. ಗೂಗಲ್ ತನ್ನ ಜಿಮೇಲ್​ನಲ್ಲಿನ ಬೇಸಿಕ್ ಎಚ್​ಟಿಎಂಎಲ್​ ಆವೃತ್ತಿಯನ್ನು ನಿಲ್ಲಿಸುವುದಾಗಿ ಘೋಷಿಸಿದೆ.

ಜನವರಿ 2024 ರವರೆಗೆ ನೀವು ಸ್ಟ್ಯಾಂಡರ್ಡ್ ಆವೃತ್ತಿಯನ್ನು ಬೆಂಬಲಿಸದ ಬ್ರೌಸರ್ ಅನ್ನು ಬಳಸುತ್ತಿದ್ದರೆ ನಿಮ್ಮ ಕಂಪ್ಯೂಟರ್ ಮತ್ತು ನಿಮ್ಮ ಮೊಬೈಲ್ ಬ್ರೌಸರ್​ನಲ್ಲಿ ಬೇಸಿಕ್ ಎಚ್​ಟಿಎಂಎಲ್​ ನಲ್ಲಿ ಜಿಮೇಲ್ ನೋಡಬಹುದು ಎಂದು ಕಂಪನಿ ತನ್ನ ಸಪೋರ್ಟ್​ ಪೇಜ್​ನಲ್ಲಿ ಉಲ್ಲೇಖಿಸಿದೆ.ಬೇಸಿಕ್ ಎಚ್​ಟಿಎಂಎಲ್​ಗೆ ತನ್ನ ಬೆಂಬಲವನ್ನು ನಿಲ್ಲಿಸಲು ಗೂಗಲ್ ಯಾವಾಗ ನಿರ್ಧರಿಸಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ “ನಿಮ್ಮ ಬ್ರೌಸರ್​ನಲ್ಲಿ ಜಿಮೇಲ್​ನ ಇತ್ತೀಚಿನ ಆವೃತ್ತಿಯನ್ನು ಬಳಸಿ” (Use the latest version of Gmail in your browser) ಎಂಬ ಶೀರ್ಷಿಕೆಯ ಈ ಬೆಂಬಲ ಪುಟದಲ್ಲಿ ಇದರ ಬಗ್ಗೆ ಮಾಹಿತಿಯನ್ನು ಕಾಣಬಹುದು.

ಗೂಗಲ್ ನ್ಯೂಸ್​ಗೆ ಮತ್ತೆರಡು ಭಾರತೀಯ ಭಾಷೆಗಳ ಸೇರ್ಪಡೆ: ಭಾರತೀಯ ಭಾಷಾ ಸುದ್ದಿ ವ್ಯವಸ್ಥೆಯನ್ನು ಬೆಂಬಲಿಸುವ ಮತ್ತು ಭಾರತೀಯ ಭಾಷಾ ವೆಬ್ ಅನ್ನು ವಿಸ್ತರಿಸುವ ವಿಷಯದಲ್ಲಿ ಗೂಗಲ್ ಇಂಡಿಯಾ ಎರಡು ಮಹತ್ವದ ಬೆಳವಣಿಗೆಗಳನ್ನು ಘೋಷಿಸಿದೆ. ಮೊದಲನೆಯದಾಗಿ, ಗೂಗಲ್ ನ್ಯೂಸ್ ಈಗ ಇನ್ನೂ ಎರಡು ಭಾರತೀಯ ಭಾಷೆಗಳಾದ ಗುಜರಾತಿ ಮತ್ತು ಪಂಜಾಬಿಗಳನ್ನು ಸ್ಯೂಸ್​ಗೆ ಸೇರಿಸಲಿದೆ. ಅಲ್ಲಿಗೆ ಗೂಗಲ್​ ನ್ಯೂಸ್​ನಲ್ಲಿ ಒಟ್ಟು 10 ಭಾರತೀಯ ಭಾಷೆಗಳು ಬೆಂಬಲಿತವಾಗಲಿವೆ. ಎರಡನೆಯದಾಗಿ, ಈ ವರ್ಷದ ಆರಂಭದಲ್ಲಿ ಘೋಷಿಸಲಾದ ಜಿಎನ್‌ಐ ಭಾರತೀಯ ಭಾಷೆಗಳ ಯೋಜನೆಯಡಿ ಭಾರತದಾದ್ಯಂತ ಸುದ್ದಿ ಪ್ರಕಾಶಕರಿಂದ 600 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ಇದರಲ್ಲಿ 300ಕ್ಕೂ ಹೆಚ್ಚು ಪ್ರಕಾಶಕರನ್ನು ಆಯ್ಕೆ ಮಾಡಲಾಗಿದೆ.

ಆಂಡ್ರಾಯ್ಡ್​ನಲ್ಲಿ Select all ಬಟನ್ ಸೇರ್ಪಡೆ: ಏತನ್ಮಧ್ಯೆ ಗೂಗಲ್ ಆಂಡ್ರಾಯ್ಡ್​​ನಲ್ಲಿ ಜಿಮೇಲ್​ಗೆ “Select all” ಬಟನ್ ಅನ್ನು ಸೇರಿಸುತ್ತಿದೆ. ಈ ಹೊಸ ವೈಶಿಷ್ಟ್ಯವು ಇನ್​ಬಾಕ್ಸ್​ನಲ್ಲಿರುವ ಮೇಲ್​ಗಳನ್ನು ಸುಲಭವಾಗಿ ಡಿಲೀಟ್​ ಮಾಡಲು ಸಹಾಯ ಮಾಡುತ್ತದೆ. Select all ಮೂಲಕ ಈಗ ನೀವು ಏಕಕಾಲಕ್ಕೆ 50 ಮೇಲ್​ಗಳನ್ನು ಸೆಲೆಕ್ಟ್​ ಮಾಡಬಹುದು ಮತ್ತು ಅವನ್ನು ಒಂದೇ ಬಾರಿಗೆ ಡಿಲೀಟ್ ಮಾಡಬಹುದು.

Select all ಇಲ್ಲದಿರುವಾಗ ಆಂಡ್ರಾಯ್ಡ್​ನಲ್ಲಿ ಇನ್​ಬಾಕ್ಸ್​ನಲ್ಲಿರುವ ಮೇಲ್​ಗಳನ್ನು ಡಿಲೀಟ್​ ಮಾಡುವಾಗ ಒಂದೊಂದೇ ಮೇಲ್​ಗಳನ್ನು ಸೆಲೆಕ್ಟ್​ ಮಾಡಬೇಕಿತ್ತು. ಇದು ತೀರಾ ಸಮಯ ತೆಗೆದುಕೊಳ್ಳುವ ಹಾಗೂ ಕಿರಿಕಿರಿಯ ಪ್ರಕ್ರಿಯೆಯಾಗಿತ್ತು. ಈಗ Select all ಮೂಲಕ ಇನ್​ಬಾಕ್ಸ್​ ಖಾಲಿ ಮಾಡುವುದು ಸುಲಭವಾಗಿದೆ.