ರೈಲಿನಲ್ಲಿ ಪ್ರಯಾಣಿಸಿ ರಾಹುಲ್​ ಗಾಂಧಿ ಘೋಷಣೆ : ‘ನಾವು ಅಧಿಕಾರಕ್ಕೆ ಬಂದರೆ ಜಾತಿ ಸಮೀಕ್ಷೆ ಖಂಡಿತ’

ನವದೆಹಲಿ: ಛತ್ತೀಸ್​ಗಢ ವಿಧಾನಸಭೆ ಚುನಾವಣೆ ಶೀಘ್ರವೇ ನಡೆಯಲಿದ್ದು, ಪಕ್ಷದ ನಾಯಕ ರಾಹುಲ್​ ಗಾಂಧಿ ಬಿಲಾಸ್​ಪುರದಲ್ಲಿ ಪ್ರಚಾರ ಕಾರ್ಯ ಮಾಡಿದರು. ಜಾತಿ ಗಣತಿ ವಿಚಾರಕ್ಕೆ ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳ ಮಧ್ಯೆ ಆಗಾಗ್ಗೆ ವಾಗ್ವಾದ ನಡೆಯುತ್ತಿರುತ್ತದೆ. ಅದೇ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಇಂಡಿಯಾ ಕೂಟ ಅಧಿಕಾರಕ್ಕೆ ಬಂದರೆ, ಜಾತಿ ಗಣತಿಯನ್ನು ಮಾಡಿಸಿ, ಅದರ ವರದಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಘೋಷಣೆ ಮಾಡಿದರು.

.
ಛತ್ತೀಸ್​​ಗಢದ ಬಿಲಾಸ್​ಪುರದಲ್ಲಿ ಸೋಮವಾರ ಆಯೋಜಿಸಿದ್ದ ‘ಆವಾಸ್ ನ್ಯಾಯ ಸಮ್ಮೇಳನ’ದಲ್ಲಿ ಮಾತನಾಡಿದ ರಾಹುಲ್, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ, ಈ ಹಿಂದಿನ ಯುಪಿಎ ಆಡಳಿತಾವಧಿಯಲ್ಲಿ ನಡೆದ ಜಾತಿ ಗಣತಿ ವರದಿಯನ್ನು ಏಕೆ ಬಿಡುಗಡೆ ಮಾಡುತ್ತಿಲ್ಲ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಜಾತಿ ಗಣತಿಯನ್ನು ಮತ್ತೆ ನಡೆಸಿ, ಅದರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು

ಪಿಎಂ ಮೋದಿ ಅಥವಾ ಬಿಜೆಪಿ ಒಂದು ಸಲ ರಿಮೋಟ್​ ಒತ್ತಿದರೆ, ಅದಾನಿಗೆ ಮುಂಬೈ ವಿಮಾನ ನಿಲ್ದಾಣ, ಎರಡನೇ ಸಲ ಅದುಮಿದರೆ, ರೈಲ್ವೆ ಯೋಜನೆಗಳು, ಮೂರನೇ ಸಲಕ್ಕೆ ಮೂಲಸೌಕರ್ಯ ಯೋಜನೆಗಳು ಗುತ್ತಿಗೆ ಸಿಗುತ್ತವೆ. ಪ್ರಸ್ತುತ ಎರಡು ರಿಮೋಟ್ ಕಂಟ್ರೋಲ್‌ಗಳು ಸರ್ಕಾರದ ಬಳಿ ಇವೆ. ಆದರೆ, ನಮ್ಮಲ್ಲಿ ಇರುವ ರಿಮೋಟ್ ಕಂಟ್ರೋಲ್ ಒತ್ತಿದರೆ, ಪ್ರತಿ ಕ್ವಿಂಟಾಲ್ ಭತ್ತಕ್ಕೆ 2,500 ರೂಪಾಯಿ ಹಣ ನೇರವಾಗಿ ರೈತರ ಖಾತೆಗೆ ಜಮಾ ಆಗುತ್ತವೆ. ಆಂಗ್ಲ ಮಾಧ್ಯಮ ಶಾಲೆಗಳ ನಿರ್ಮಾಣ, ಸೌಕರ್ಯಗಳು ದೊರೆಯುತ್ತವೆ.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಿಮೋಟ್​ ಒತ್ತಿದರೆ, ಸಿರಿವಂತ ಉದ್ಯಮಿಗಳು, ಅದಾನಿಗೆ ವಿಮಾನ ನಿಲ್ದಾಣ, ಬಂದರು, ದೊಡ್ಡ ಯೋಜನೆಗಳಿಗೆ ಗುತ್ತಿಗೆ ಸಿಗುತ್ತದೆ. ಅದೇ ನಮ್ಮ ಪಕ್ಷ ಬಡವರ ಕಲ್ಯಾಣಕ್ಕಾಗಿ ಮಾತ್ರ ದುಡಿಯುತ್ತದೆ ಎಂದು ಹೇಳಿದರು.

ಹಿಂದುಳಿದ ವರ್ಗಕ್ಕಿಲ್ಲ ಅವಕಾಶ: ಈಗಿನ ಸರ್ಕಾರವನ್ನು ಸಚಿವ ಸಂಪುಟ ಕಾರ್ಯದರ್ಶಿಗಳು, ಇತರ ಕಾರ್ಯದರ್ಶಿಗಳು ನಡೆಸುತ್ತಾರೆ. ಆದರೆ, ನಿಜವಾಗಿಯೂ ಸರ್ಕಾರದ ಭಾಗವಾಗಿರಬೇಕಾದವರು ಸಂಸದರು ಮತ್ತು ಸಚಿವರು. ಆದರೆ, ಇಲ್ಲಿ ಹಾಗಿಲ್ಲ. ಕೇಂದ್ರ ಸಚಿವಾಲಯಗಳಲ್ಲಿನ 90 ಕಾರ್ಯದರ್ಶಿಗಳಲ್ಲಿ ಮೂವರು ಮಾತ್ರ ಹಿಂದುಳಿದ ವರ್ಗದವರಿದ್ದಾರೆ. ಕೇಂದ್ರ ಬಜೆಟ್‌ನಲ್ಲಿ ಕೇವಲ 5 ಪ್ರತಿಶತವನ್ನು ಮಾತ್ರ ಅವರು ಪ್ರತಿನಿಧಿಸುತ್ತಾರೆ. ಇಡೀ ದೇಶದಲ್ಲಿ ಕೇವಲ ಐದು ಪ್ರತಿಶತದಷ್ಟು ಮಾತ್ರ ಒಬಿಸಿಗಳು ಇದ್ದಾರೆಯೇ ಎಂದು ರಾಹುಲ್​ ಪ್ರಶ್ನಿಸಿದರು.

ಈ ಹಿಂದೆ ರಾಹುಲ್ ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣಕ್ಕೆ ಭೇಟಿ ಅಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರನ್ನು ಭೇಟಿಯಾಗಿ ಅವರ ಅಹವಾಲು ಆಲಿಸಿದ್ದರು. ಜೊತೆಗೆ ರೈಲ್ವೇ ಕಾರ್ಮಿಕರ ಸಮವಸ್ತ್ರ ಧರಿಸಿ ಸಾಮಾನು ಸರಂಜಾಮು ಹೊತ್ತಿದ್ದರು. ಇದರ ಫೋಟೋ, ವಿಡಿಯೋ ವೈರಲ್​ ಆಗಿವೆ.ರಾಹುಲ್ ಗಾಂಧಿ ರೈಲು ಪ್ರಯಾಣ: ಬಿಲಾಸ್​ಪುರ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ರಾಹುಲ್ ಗಾಂಧಿ ಅವರು ರೈಲಿನಲ್ಲಿ ಪ್ರಯಾಣಿಸಿದರು. ಬಿಲಾಸ್‌ಪುರದಿಂದ ರಾಯಪುರಕ್ಕೆ ರೈಲಿನಲ್ಲೇ ಬಂದರು. ಈ ವೇಳೆ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಕಾಂಗ್ರೆಸ್ ಅಧಿಕೃತ ಎಕ್ಸ್​ನಲ್ಲಿ ಹಂಚಿಕೊಂಡಿದೆ.