ಬೆಂಗಳೂರು-ಮಂಗಳೂರು-ಮುರ್ಡೇಶ್ವರ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದ್ದು, ಇದೀಗ ರೈಲು ಮೊದಲಿಗಿಂತ 40 ನಿಮಿಷ ಮುಂಚಿತವಾಗಿ ಮುರ್ಡೇಶ್ವರಕ್ಕೆ ತಲುಪಲಿದೆ.
ಬೆಂಗಳೂರು-ಮೈಸೂರು-ಮಂಗಳೂರು ರೈಲು 16585 ನ್ನು ಸೆ. 16 ರಿಂದ ಮುರ್ಡೇಶ್ವರವರೆಗೆ ವಿಸ್ತರಿಸಲಾಗಿತ್ತು. ವಾರದ ಆರು ದಿನ ಸಂಚಾರ ಮಾಡುವ ರೈಲು ಮಂಗಳೂರಿನಿಂದ ಮುರ್ಡೇಶ್ವರ ತಲುಪಲು ಅನಗತ್ಯ ವಿಳಂಬವಾಗುತ್ತಿದೆ. ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ನಿಧಾನವಾಗುತ್ತಿದೆ ಎಂಬ ದೂರು ಕೇಳಿ ಬಂದಿತ್ತು. ಈಬಗ್ಗೆ ಮಾಧ್ಯಮ ವರದಿಗಳೂ ಬಂದಿದ್ದವು.
ಇದೀಗ ನೈರುತ್ಯ ರೈಲ್ವೆಯು ವೇಳಾ ಪಟ್ಟಿಯನ್ನು ಶನಿವಾರ ಪರಿಷ್ಕರಿಸಿದ್ದು, ಮಂಗಳೂರು ಸೆಂಟ್ರಲ್ ವರೆಗೆ ವೇಳಾಪಟ್ಟಿಯಲ್ಲಿ ಯಾವುದೇ ಬದಲಿಲ್ಲ. ಅಲ್ಲಿಂದ ಮುಂದೆ ಸುರತ್ಕಲ್ ಗೆ 10.34 ಕ್ಕೆ ತಲುಪುತ್ತಿದ್ದ ರೈಲು ಇನ್ನು 9.48 ತಲುಪಲಿದ್ದು, ಮಧ್ಯಾಹ್ನ 1.35 ಕ್ಕೆ ಮುರ್ಡೇಶ್ವರಕ್ಕೆ ತಲುಪುತ್ತಿದ್ದ ರೈಲು ಇನ್ನು 12.55ಕ್ಕೆ ತಲುಪಲಿದೆ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಸ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.