ದಟ್ಟ ‘ಕಾಂತಾರ’ದಲ್ಲಿ ಕಾಣೆಯಾದ ಯುವಕ ಎಂಟು ದಿನಗಳ ಬಳಿಕ ಪತ್ತೆ!! ಇದು ಪಂಜುರ್ಲಿ ದೈವದ ಕಾರ್ನಿಕ ಎಂದ ಜನರು…

ಕುಂದಾಪುರ: ಮನೆಯಿಂದ ನಾಲ್ಕು ಕಿ.ಮೀ ದೂರದ ದಟ್ಟ ಕಾಡಿಗೆ ತೆರಳಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿ 8 ದಿನಗಳ ಬಳಿಕ ಸುರಕ್ಷಿತವಾಗಿ ಮರಳಿ ಅಚ್ಚರಿ ಹುಟ್ಟಿಸಿರುವ ಮಚ್ಚಟ್ಟು ಗ್ರಾಮದ ತೊಂಬಟ್ಟುವಿನ ಇರ್ಕಿಗದ್ದೆ ನಿವಾಸಿ ಶೀನ ನಾಯ್ಕೆ ಅವರ ಪುತ್ರ 28 ವರ್ಷದ ವಿವೇಕಾನಂದ ಎನ್ನುವವರು ಇದೀಗ ಮನೆಮಾತಾಗಿದ್ದಾರೆ. ಸೆ. 16 ರಂದು ನಾಪತ್ತೆಯಾದ ಯುವಕ ಸೆ. 23 ರಂದು ಪತ್ತೆಯಾಗಿದ್ದಾರೆ.

ಎಂಟು ದಿನಗಳ ಹಿಂದೆ ತನ್ನ ಎರಡು ನಾಯಿಗಳ ಜೊತೆ ಕಾನನ ಪ್ರವೇಶಿಸಿದ್ದ ವಿವೇಕಾನಂದ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಎರಡು ನಾಯಿಗಳಲ್ಲಿ ಒಂದು ನಾಯಿ ಹಿಂದುರುಗಿದ್ದರೆ ಮತ್ತೊಂದು ನಾಯಿ ಹಿಂದುರುಗಿರಲಿಲ್ಲ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು, ಅರಣ್ಯ ಇಲಾಖೆಯ ಅಧಿಕಾರಿಗಳು, ಮನೆಯವರು ಹುಡುಕಾಟ ನಡೆಸಿದ್ದರೂ ಪ್ರಯೋಜನವಾಗಿರಲ್ಲಿಲ್ಲ.

ಕಡೆಗೆ ದೈವದ ಮೊರೆ ಹೋದ ಮನೆಯವರು ಮನೆ ದೈವ ಪಂಜುರ್ಲಿ ಹಾಗೂ ಕಟಪಾಡಿಯ ಕೊರಗಜ್ಜ ಸನ್ನಿಧಾನದಲ್ಲಿ ಅರಕೆ ಮಾಡಿಕೊಂಡಾಗ ಆತೆ ಬದುಕಿದ್ದಾನೆ ಮತ್ತು ಸುರಕ್ಷಿತವಾಗಿ ಹಿಂದಿರುಗುತ್ತಾನೆ ಎನ್ನುವ ಅಭಯದೊರೆತಿದ್ದು, ಮನೆಯ ಗದ್ದೆಯಲ್ಲಿದ್ದ ಪಂಜುರ್ಲಿ ದೈವದ್ದು ಎನ್ನಲಾದ ಕಲ್ಲಿಗೆ ಕೈ ಮುಗಿದು, ದೀಪವಿಟ್ಟು ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ. ಪವಾಡವೆಂಬಂತೆ ವಿವೇಕಾನಂದ ಸುರಕ್ಷಿತವಾಗಿ ಮನೆಗೆ ಮರಳಿದ್ದಾನೆ!

ಈ ಬಗ್ಗೆ ಆತನಲ್ಲಿ ಕೇಳಿದಾಗ ಗದ್ದೆಯಲ್ಲಿದ್ದ ಕಲ್ಲಿನ ಮೇಲೆ ಕುಳಿತಿದ್ದೆ, ಆ ಬಳಿಕ ಕಾಡಿಗೆ ತೆರಳಿದ್ದೆ ಆ ಬಳಿಕ ತನಗೇನಾಯಿತು ಎನ್ನುವುದೇ ಗೊತ್ತಿಲ್ಲ ಎಂದು ಹೇಳಿದ್ದಾನೆ. ಎಂಟು ದಿನಗಳು ಕೂಡಾ ಸಾಕು ನಾಯಿ ಆತನ ಜೊತೆಗಿದ್ದು ಆತನ ರಕ್ಷಣೆ ಮಾಡಿದೆ. ಮರಳಿ ಬರುವವರೆಗೂ ತನಗೇನಾಗಿತ್ತು ಎನ್ನುವುದು ತನಗೆ ತಿಳಿದಿಲ್ಲ ಎಂದು ಆತ ಹೇಳಿರುವುದಾಗಿ ವರದಿಯಾಗಿದೆ.

ಯುವಕ ಹಸಿವು ನೀರಡಿಕೆಗಳಿಂದ ಬಳಲಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಮನೆಯವರು ಹೇಳಿದ್ದಾರೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ ಯುವಕನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಇದು ಪಂಜುರ್ಲಿ ದೈವದ ಪವಾಡವಲ್ಲದೆ ಬೇರೇನೂ ಅಲ್ಲ ಎಂದು ಮನೆಯವರು ಮತ್ತು ಊರವರು ನಂಬಿದ್ದಾರೆ. ವಿಜ್ಞಾನದ ಪರಿಧಿಗೆ ನಿಲುಕದ ಈ ವಿದ್ಯಮಾನಕ್ಕೆ ಎಲ್ಲರೂ ಬೆರಗಾಗಿದ್ದಾರೆ.