ಕಾವೇರಿ ನಾವು ಕೊಡೆವು; ನಾವು ಬಿಡೆವು: ಕರ್ನಾಟಕ-ತಮಿಳುನಾಡಿನಲ್ಲಿ ‘ಕಾವೇರಿ’ದ ಜಲ ಕದನ; ಬೆಂಗಳೂರು ಬಂದ್ ಗೆ ಕರೆ ನೀಡಿದ ಸಂಘಟನೆಗಳು

ಚೆನ್ನೈ: ಭಾನುವಾರ ತಮಿಳುನಾಡಿನಲ್ಲಿ ಕಾವೇರಿ ಜಲವಿವಾದದ ಪ್ರತಿಭಟನೆ ತೀವ್ರಗೊಂಡಿದ್ದು, ತಿರುಚ್ಚಿಯ ರೈತರು ತಮ್ಮ ರಾಜ್ಯಕ್ಕೆ ನದಿ ನೀರು ಬಿಡುವಂತೆ ಒತ್ತಾಯಿಸಿದ್ದತೆ ಇತ್ತ ಕನ್ನಡ ಪರ ಸಂಘಟನೆಗಳು ಹಾಗೂ ಮಂಡ್ಯದಲ್ಲಿ ರೈತರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ನೆರೆಯ ರಾಜ್ಯಕ್ಕೆ ಕಳುಹಿಸುವಷ್ಟು ನೀರಿಲ್ಲ ಎಂಬುದು ಕರ್ನಾಟಕ ಸರ್ಕಾರದ ವಾದವಾದರೂ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ರಾಜತಾಂತ್ರಿಕವಾಗಿ ಸಮಸ್ಯೆಯನ್ನು ನಿಭಾಯಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಡಿಎಂಕೆ ಹೇಳಿದೆ.

ತಮಿಳುನಾಡು ಮತ್ತು ಕರ್ನಾಟಕದಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು, ಎರಡೂ ರಾಜ್ಯಗಳ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕನ್ನಡ ಪರ ಸಂಘಟನೆಗಳು ರೈತರೊಂದಿಗೆ ಪ್ರತಿಭಟನೆ ನಡೆಸುತ್ತಿವೆ. ಕರ್ನಾಟಕದಲ್ಲಿ, ‘ಮಂಡ್ಯ ಬಂದ್’ ಆಚರಿಸುತ್ತಿರುವ ರೈತರು ಮತ್ತು ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.

ಕನ್ನಡ ಪರ ಸಂಘಟನೆಗಳು ಸೆಪ್ಟೆಂಬರ್ 26 ರಂದು ‘ಬೆಂಗಳೂರು ಬಂದ್’ಗೆ ಕರೆ ನೀಡಿದ್ದು, ಶಾಲಾ, ಕಾಲೇಜುಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳ ಮಾಲೀಕರು, ಕಾರ್ಖಾನೆಗಳು, ಕಂಪನಿಗಳು ಮತ್ತು ಸಾಗಣೆದಾರರು ತಮ್ಮ ಕರೆಯನ್ನು ಬೆಂಬಲಿಸುವಂತೆ ಮನವಿ ಮಾಡಿವೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ಹಾಗೂ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.

ರಾಜ್ಯದ ಹಿತಾಸಕ್ತಿ ಕಾಪಾಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಆದರೂ ವಿರೋಧ ಪಕ್ಷಗಳು ಕಾವೇರಿ ವಿಚಾರಕ್ಕೆ ರಾಜಕೀಯ ಆಯಾಮ ನೀಡುತ್ತಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ತಮಿಳುನಾಡಿಗೆ ನೀರು ಬಿಡುವ ಕುರಿತು ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (ಸಿಡಬ್ಲ್ಯುಎಂಎ) ಮನವಿ ಸಲ್ಲಿಸಿದೆ ಎಂದಿದ್ದಾರೆ.