ಜಾನುವಾರು ಕಳ್ಳಸಾಗಣೆ ವೇಳೆ ಬಿಎಸ್​ಎಫ್​ ಗುಂಡಿಗೆ ಓರ್ವ ಬಲಿ

ಜಾನುವಾರು ಕಳ್ಳಸಾಗಣೆ ವೇಳೆ ಬಿಎಸ್​ಎಫ್​ ಗುಂಡಿಗೆ ಓರ್ವ ಬಲಿದಕ್ಷಿಣ ಸಲ್ಮಾರಾ ಮಂಕಾಚಾರ್ (ಅಸ್ಸಾಂ) : ಬಾಂಗ್ಲಾದೇಶಕ್ಕೆ ಜಾನುವಾರುಗಳನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಗುಂಡಿಕ್ಕಿ ಕೊಂದಿರುವ ಘಟನೆ ಅಸ್ಸಾಂನ ದಕ್ಷಿಣ ಸಲ್ಮಾರಾ ಮಂಕಾಚಾರ್ ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಂಡೋ-ಬಾಂಗ್ಲಾದೇಶ ಗಡಿಯ ಖರುವಾಬಂಧಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಭಾರತದಿಂದ ಅಸ್ಸಾಂಗೆ ಜಾನುವಾರು ಕಳ್ಳಸಾಗಣೆ ಮಾಡುತ್ತಿದ್ದ ಶಂಕೆಯ ಮೇಲೆ ಆರೋಪಿಯೊಬ್ಬನನ್ನು ಗಡಿ ಭದ್ರತಾ ಸಿಬ್ಬಂದಿ ಗುಂಡಿಕ್ಕಿ ಕೊಂದು ಹಾಕಿದ್ದಾರೆ.

ಘಟನೆಯ ನಂತರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಮತ್ತು ಖರುವಾಬಂಧಾ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಭದ್ರತಾ ಪಡೆಗಳ ಗುಂಡಿನಿಂದ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ದಕ್ಷಿಣ ಸಲ್ಮಾರಾ ಮಂಕಾಚಾರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹೊರೆನ್ ಟೋಕ್ಬಿ ತಿಳಿಸಿದ್ದಾರೆ.

ಪ್ರತಿ ವರ್ಷ, 2 ದಶಲಕ್ಷಕ್ಕೂ ಹೆಚ್ಚು ಜಾನುವಾರುಗಳನ್ನು ಭಾರತದಿಂದ ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಭಾರತ-ಬಾಂಗ್ಲಾದೇಶ ಗಡಿ ಹಲವಾರು ಕಡೆ ಮುಕ್ತವಾಗಿರುವುದರಿಂದ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಪಶ್ಚಿಮ ಬಂಗಾಳ ಕಡೆಗೆ ಬಾಂಗ್ಲಾದೇಶದೊಂದಿಗೆ 2,217 ಕಿ.ಮೀ ಗಡಿ ಇದೆ. ಇದರಲ್ಲಿ 579 ಕಿ.ಮೀ ಗಡಿಯಲ್ಲಿ ನದಿಗಳು ಮತ್ತು ದುರ್ಗಮ ಪ್ರದೇಶವಿರುವುದರಿಂದ ಇಲ್ಲಿ ಬೇಲಿ ಅಳವಡಿಸಲು ಸಾಧ್ಯವಾಗಿಲ್ಲ.

ಇಮಾಂಬಜಾರ್ ಪ್ರದೇಶದ ಹತ್ತಿರದಲ್ಲಿರುವ ಗಂಗಾ, ಪದ್ಮಾ ಮತ್ತು ಭಾಗೀರಥಿ ನದಿಗಳ ಸಂಗಮದ ಉದ್ದಕ್ಕೂ ಜಾನುವಾರು ಕಳ್ಳಸಾಗಣೆ ನಡೆಯುತ್ತಿದೆ. ಜಗ್ತೈ, ನೂರ್ಪುರ್, ದೇಬಿಪುರ್, ಹಮೀದಪುರ್, ವಾಜಿಬ್​ಪುರ್ ಮತ್ತು ಇತರ ಅನೇಕ ಬಂಗಾಳದ ಗ್ರಾಮಗಳು ರಾಜ್ಯದ ಬಹುಕೋಟಿ ಡಾಲರ್ ಜಾನುವಾರು ಕಳ್ಳಸಾಗಣೆ ಮಾರ್ಗಗಳಲ್ಲಿ ಪ್ರಮುಖ ಕೊಂಡಿಗಳಾಗಿವೆ. ನೂರಾರು ಗ್ರಾಮಸ್ಥರು ಜಾನುವಾರು ಪೂರೈಕೆ ಸರಪಳಿಯ ಭಾಗವಾಗಿದ್ದಾರೆ. ಗಡಿಯುದ್ದಕ್ಕೂ ಇರುವ ಪ್ರತಿಯೊಂದು ಹಳ್ಳಿಯಲ್ಲೂ ಇದಕ್ಕಾಗಿ ಓರ್ವ ಮುಖ್ಯಸ್ಥನಿದ್ದು, ಆತನೇ ಈ ಎಲ್ಲ ವ್ಯವಹಾರವನ್ನು ಮುನ್ನಡೆಸುತ್ತಾನೆ ಎಂದು ಬಲ್ಲ ಮೂಲಗಳು ತಿಳಿಸಿವೆ.

“ಸಂಜೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಜಾನುವಾರು ಕಳ್ಳಸಾಗಣೆದಾರರು ಆಕಳುಗಳ ತಲೆಗಳನ್ನು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದರು. ಈ ಸಮಯದಲ್ಲಿ ಭದ್ರತಾ ಪಡೆಗಳು ಗುಂಡು ಹಾರಿಸಿದ್ದಾರೆ. ಪ್ರಕರಣದ ಬಗ್ಗೆ ಬಿಎಸ್‌ಎಫ್ ಇನ್ನೂ ಎಫ್​ಐಆರ್​ ದಾಖಲಿಸಿಲ್ಲ. ನಾವು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುತ್ತಿದ್ದೇವೆ” ಎಂದು ಹೊರೆನ್ ಟೋಕ್ಬಿ ಹೇಳಿದರು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.