ಬೆಂಗಳೂರು: ತಮಿಳುನಾಡಿಗೆ 5,000 ಕ್ಯೂಸೆಕ್ ನೀರು ಬಿಡುವಂತೆ ರಾಜ್ಯಕ್ಕೆ ನಿರ್ದೇಶಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್ಸಿ) ಆದೇಶಗಳನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಕರ್ನಾಟಕದಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ.
ಮೈಸೂರು, ಮಂಡ್ಯ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ರೈತ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು ಕರ್ನಾಟಕದ ಕಾವೇರಿ ನದಿ ಜಲಾನಯನ ಜಿಲ್ಲೆಗಳಾದ್ಯಂತ ಪ್ರತಿಭಟನೆಗಳನ್ನು ಆಯೋಜಿಸಿವೆ. ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿರುವ ಸಂಘಟನೆಗಳು ತಮಿಳುನಾಡಿಗೆ ನೀರು ಬಿಡದಂತೆ ರಾಜ್ಯ ಸರ್ಕಾರಕ್ಕೆ ಕರೆ ನೀಡಿವೆ. ರಾಜ್ಯದ 220 ತಾಲೂಕುಗಳ ಪೈಕಿ 193 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದ್ದು ಈ ಹಿನ್ನೆಯಲ್ಲಿ ರಾಜ್ಯವು ತಮಿಳುನಾಡಿಗೆ ನೀರು ಬಿಡುವ ಸ್ಥಿತಿಯಲ್ಲಿಲ್ಲ.
ತನ್ನ ನೆರೆ ರಾಜ್ಯಕ್ಕೆ 5000 ಕ್ಯೂಸೆಕ್ ನೀರು ಬಿಡುವಂತೆ ನಿರ್ದೇಶಿಸಿದ ಕಾವೇರಿ ನ್ಯಾಯಾಧಿಕರಣದ ಆದೇಶಕ್ಕೆ ತಡೆ ನೀಡುವಂತೆ ಕರ್ನಾಟಕ ಆಗ್ರಹಿಸಿದ್ದರೆ, ತಮಿಳುನಾಡು ಕರ್ನಾಟಕದಿಂದ ಹೆಚ್ಚಿನ ನೀರು ಹರಿಸುವಂತೆ ಒತ್ತಾಯಿಸಿತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (ಸಿಡಬ್ಲ್ಯುಎಂಎ) ನಿರ್ಧಾರವೇ ಅಂತಿಮ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಾಧಿಕಾರ ಮತ್ತು ಸಮಿತಿಯು ಜಲಸಂಪನ್ಮೂಲ ನಿರ್ವಹಣೆ ಮತ್ತು ಕೃಷಿಯಲ್ಲಿ ವಿವಿಧ ತಜ್ಞರನ್ನು ಒಳಗೊಂಡಿವೆ ಎಂದು ನ್ಯಾಯಮೂರ್ತಿ ಬಿಆರ್ ಗವಾಯಿ, ನ್ಯಾಯಮೂರ್ತಿ ಪಿ ಎಸ್ ನರಸಿಂಹ ಮತ್ತು ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠವು ಗಮನಿಸಿದೆ. ಸಮಿತಿಯು ಈ ವರ್ಷದ ನೀರಿನ ಕೊರತೆ ಮತ್ತು ಕಳೆದ ಒಂದು ತಿಂಗಳಿನಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಹೆಚ್ಚುತ್ತಿರುವ ಪರಿಸ್ಥಿತಿ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡಿದೆ ಎಂದು ನ್ಯಾಯಾಲಯ ಗಮನಿಸಿದೆ. ಪ್ರತಿ 15 ದಿನಗಳಿಗೊಮ್ಮೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುವುದು ಎಂದು ನ್ಯಾಯಾಲಯ ಹೇಳಿದೆ.