ಕಚ್ಚಾ ತೈಲ ಬೆಲೆ ಏರಿಕೆಯಿಂದ ರೂಪಾಯಿ ಮೌಲ್ಯ ದಾಖಲೆ ಮಟ್ಟದಲ್ಲಿ ಕುಸಿತ

ಮುಂಬೈ :ಕಚ್ಚಾ ತೈಲದ ಬೆಲೆ ಏರಿಕೆಯ ಪರಿಣಾಮದಿಂದ ಭಾರತೀಯ ರೂಪಾಯಿ ಡಾಲರ್ ಎದುರು ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ 83.2675ಕ್ಕೆ ಕುಸಿದಿದೆ.

“ವಿದೇಶಿ ವಿನಿಮಯ ಮೀಸಲುಗಳ ಸಾಕಷ್ಟು ಸಂಗ್ರಹ ಹೊಂದಿರುವ ಆರ್​ಬಿಐ ರೂಪಾಯಿ ಮೌಲ್ಯವನ್ನು ಎತ್ತಿಹಿಡಿಯಲು ಪ್ರಯತ್ನ ಮಾಡುತ್ತಿದೆ. ಆದರೆ ರೂಪಾಯಿ ಮೌಲ್ಯ ಕುಸಿತವು ಒಂದು ಹಂತ ಮೀರಿ ಹೋದರೆ ಆರ್​ಬಿಐ ಏನೂ ಮಾಡಲಾಗಲ್ಲ” ಎಂದು ಖಾಸಗಿ ವಲಯದ ಬ್ಯಾಂಕಿನ ವಿದೇಶಿ ವಿನಿಮಯ ತಜ್ಞರು ಹೇಳಿದ್ದಾರೆ. ಜಾಗತಿಕ ಮಾರುಕಟ್ಟೆಗಳಲ್ಲಿನ ತೈಲ ಬೆಲೆಗಳು ಈಗ ಬ್ಯಾರೆಲ್​ಗೆ 95 ಡಾಲರ್ ಗಡಿಯನ್ನು ದಾಟುತ್ತಿವೆ. ಏತನ್ಮಧ್ಯೆ ರೂಪಾಯಿ ಮೌಲ್ಯವನ್ನು ಉತ್ತೇಜಿಸಲು ಆರ್​ಬಿಐ ಮಾರುಕಟ್ಟೆಯಲ್ಲಿ ಡಾಲರ್​ಗಳನ್ನು ಬಿಡುಗಡೆ ಮಾಡುತ್ತಿದ್ದರೂ, ದೇಶವು ತನ್ನ ಕಚ್ಚಾ ತೈಲ ಅಗತ್ಯದ ಶೇಕಡಾ 85 ರಷ್ಟು ಆಮದು ಮಾಡಿಕೊಳ್ಳುವುದರಿಂದ ಭಾರತೀಯ ಕರೆನ್ಸಿಯ ಕುಸಿತವನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

ಬೆಂಚ್ ಮಾರ್ಕ್ ಬ್ರೆಂಟ್ ಕಚ್ಚಾ ತೈಲದ ಬೆಲೆಗಳು ಈ ವರ್ಷ 100 ಡಾಲರ್ ದಾಟಬಹುದು ಎಂದು ಸಿಟಿ ಬ್ಯಾಂಕ್ ಸೋಮವಾರ ಹೇಳಿದೆ. ವಿಶ್ವದ ಹಲವಾರು ಆರ್ಥಿಕ ಸಮೀಕ್ಷಾ ಕಂಪನಿಗಳು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ. ಕಚ್ಚಾ ಬೆಲೆಗಳು ಬ್ಯಾರೆಲ್​ಗೆ 100 ಡಾಲರ್​ ಮಿರುವ ಸಾಧ್ಯತೆಯಿದೆ ಎಂದು ಚೆವ್ರಾನ್ ಸಿಇಒ ಮೈಕ್ ವಿರ್ತ್ ಕೂಡ ಹೇಳಿದ್ದಾರೆ. ಮಂಗಳವಾರದಂದು ಗಣೇಶ ಚತುರ್ಥಿ ನಿಮಿತ್ತ ರಜಾದಿನವಾಗಿರುವುದರಿಂದ ಭಾರತದ ಕರೆನ್ಸಿ, ಸಾಲ ಮತ್ತು ಈಕ್ವಿಟಿ ಮಾರುಕಟ್ಟೆಗಳು ಬಂದ್ ಆಗಿವೆ. ಮಾರುಕಟ್ಟೆಗಳು ಬುಧವಾರ ವಹಿವಾಟು ಪುನರಾರಂಭಿಸಲಿವೆ.

ಸೌದಿ ಅರೇಬಿಯಾ ಮತ್ತು ರಷ್ಯಾ ತಮ್ಮ ಕಚ್ಚಾ ತೈಲ ಪೂರೈಕೆಯ ಪ್ರಮಾಣದಲ್ಲಿ ಕಡಿತ ಮಾಡಿರುವುದನ್ನು ಈ ವರ್ಷದ ಅಂತ್ಯದವರೆಗೆ ವಿಸ್ತರಿಸಲು ನಿರ್ಧರಿಸಿದ ನಂತರ ತೈಲ ಬೆಲೆಗಳು ಕಳೆದ ಮೂರು ವಾರಗಳಿಂದ ಸತತವಾಗಿ ಏರುತ್ತಿವೆ ಮತ್ತು ನವೆಂಬರ್​ ನಂತರದ ಗರಿಷ್ಠ ಮಟ್ಟವನ್ನು ತಲುಪಿವೆ. ಮುಂದಿನ ದಿನಗಳಲ್ಲಿ ಕಚ್ಚಾತೈಲ ಪೂರೈಕೆಯ ಪ್ರಮಾಣ ಇನ್ನಷ್ಟು ಕಡಿಮೆಯಾಗುವ ಆತಂಕದ ಹಿನ್ನೆಲೆಯಲ್ಲಿ ಖರೀದಿ ಹೆಚ್ಚಾಗುತ್ತಿದೆ. ಇದರಿಂದ ಕೂಡ ಬೆಲೆಗಳು ಹೆಚ್ಚಾಗುತ್ತಿವೆ. ಸದ್ಯ ಭಾರತೀಯ ಷೇರು ಮಾರುಕಟ್ಟೆಗಳಲ್ಲಿನ ವಿದೇಶಿ ಹೂಡಿಕೆಗಳು ರೂಪಾಯಿಯ ಇಳಿಕೆಯನ್ನು ನಿಯಂತ್ರಿಸಲು ಸಹಾಯ ಮಾಡಿವೆ. ಆದರೆ ಇದು ಚಂಚಲ ಪ್ರವೃತ್ತಿಯ ಹಣವಾಗಿದ್ದು, ಯಾವಾಗ ಬೇಕಾದರೂ ಇದು ಹೊರಹೋಗಬಹುದು. ಹಾಗಾಗಿ ಅವಲಂಬಿಸಲಾಗುವುದಿಲ್ಲ ಎಂದು ವಿಶ್ಲೇಷಕರು ಹೇಳಿದ್ದಾರೆ.