ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘ ಬಹುಕೋಟಿ ವಂಚನೆ ಪ್ರಕರಣ: ಸ್ಪೀಕರ್ ಗೆ ಮನವಿ ಸಲ್ಲಿಸಿದ ಸಂತ್ರಸ್ತರು

ಉಡುಪಿ: ಕಳೆದ ಡಿಸೆಂಬರ್ ನಲ್ಲಿ ಇಲ್ಲಿನ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸಂಘ(ನಿ) ಎಂಬ ಸೊಸೈಟಿಯಲ್ಲಿ ಬಹುಕೋಟಿ ಹಗರಣ ನಡೆದಿರುವ ಘಟನೆ ವರದಿಯಾಗಿತ್ತು. ಸಂಸ್ಥೆಯು ತನ್ನ ಠೇವಣಿದಾರ ಗ್ರಾಹಕರಿಗೆ ಬಡ್ಡಿ ಅಥವಾ ಅವಧಿ ಮುಗಿದ ಠೇವಣಿ ಮೊಬಲಗನ್ನು ಹಿಂತಿರುಗಿಸದೆ ಕೋಟಿಗಟ್ಟಲೆ ಆರ್ಥಿಕ ವಂಚನೆ ನಡೆಸಿದ್ದ ಬಗ್ಗೆ ಜಿಲ್ಲೆಯಾದ್ಯಂತ ವರದಿಯಾಗಿತ್ತು.

ಈ ಬಗ್ಗೆ ಉಡುಪಿ ನಗರ ಠಾಣೆ ಹಾಗೂ ಸೆನ್ ಠಾಣೆಗಳಲ್ಲಿ ದೂರು ದಾಖಲಿಸಿ ಎಫ್.ಐ.ಆರ್ ದಾಖಲಿಸಲಾಗಿತ್ತು. ಇದರ ಪರಿಣಾಮವಾಗಿ ಸೆನ್ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ಸಂಸ್ಥೆಯ ಹೆಸರಿನಲ್ಲಿರುವ ಆಸಿಪಾಸ್ತಿಗಳನ್ನು ಗ್ರಾಹಕರ ಸಮಕ್ಷಮ ಮಹಜರು ನಡೆಸಿ, ಆಸ್ತಿ ಮುಟ್ಟುಗೋಲು ಹಾಕುವಂತೆ ಉಡುಪಿ ಜಿಲ್ಲೆಯ ಅಸಿಸ್ಟೆಂಟ್ ಕಮಿಷನರ್ ಅವರಿಗೆ ಕೋರಿಕೆ ಸಲ್ಲಿಸಿದ್ದರು. ಆದರೆ ಮಹಜರು ನಡೆದು ಇಷ್ಟು ತಿಂಗಳುಗಳು ಕಳೆದರೂ ಅಸಿಸ್ಟೆಂಟ್ ಕಮಿಷನರ್ ಅಥವಾ ಸರಕಾರದ ವತಿಯಿಂದ ಆಪಾದಿತ ಸಂಸ್ಥೆಯ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಿರುವ ಬಗ್ಗೆ ಯಾವುದೇ ಅಧಿಸೂಚನೆ ಪ್ರಕಟಿಸದೇ ಇರುವುದರಿಂದ ಹಾಗೂ ಸಂತ್ರಸ್ತರ ಲಿಖಿತ ಮನವಿಗೂ ಅಸಿಸ್ಟೆಂಟ್ ಕಮಿಷನರ್ ರಶ್ಮಿ ಎಸ್.ಆರ್ ಸ್ಪಂದಿಸದೇ ಇರುವುದರಿಂದ ಸಂತ್ರಸ್ತರ ಪರವಾಗಿ ಶ್ರೀನಿವಾಸ್ ಪ್ರಭು, ರಮೇಶ್ ಪ್ರಭು ಮತ್ತು ಪ್ರಶಾಂತ್ ಕಾಮತ್ ಅವರು ಪ್ರಕರಣವನ್ನು ಸ್ಪೀಕರ್ ಯು.ಟಿ ಖಾದರ್ ಅವರ ಗಮನಕ್ಕೆ ತಂದಿದ್ದಾರೆ.

ಈ ಪ್ರಕರಣವನ್ನು ಶೀಘ್ರಾತಿಶೀಘ್ರವಾಗಿ ಸರಕಾರದ ಗಮನಕ್ಕೆ ತಂದು ಮೋಸ ಹೋದ ಠೇವಣಿದಾರರೆಲ್ಲರಿಗೂ ಠೇವಣಿ ಮೊಬಲಗನ್ನು ಹಿಂತಿರುಗಿಸಿ ಕೊಡುವಂತೆ ಮತ್ತು ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡುವಂತೆ ವಿಸ್ತೃತ ವರದಿಯನ್ನು ಸ್ಪೀಕರ್ ಅವರಿಗೆ ಸಲ್ಲಿಸಿದ್ದಾರೆ.

ಈ ಬಗ್ಗೆ ಸ್ಪಂದಿಸಿರುವ ಸ್ಪೀಕರ್ ಯು.ಟಿ.ಖಾದರ್, ಪ್ರಕರಣವನ್ನು ಸರಕಾರದ ಮಟ್ಟದಲ್ಲಿ ಆದಷ್ಟು ಬೇಗ ವಿಲೇವಾರಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಆರ್.ಟಿ.ಐ ಕಾರ್ಯಕರ್ತ ಶ್ರೀನಿವಾಸ್ ಪ್ರಭು ತಿಳಿಸಿದ್ದಾರೆ.