ಉಡುಪಿ: ಆನ್ ಲೈನ್ ವೇದಿಕೆ OLX ಮೂಲಕ ತನ್ನ ವಸ್ತುಗಳನ್ನು ಮಾರಾಟ ಮಾಡಲು ಬಯಸಿದ್ದ ಮಹಿಳೆಯೊಬ್ಬರು ಆನ್ಲೈನ್ ವಂಚನೆಯಲ್ಲಿ 1.28 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಉಷಾ ಕಿರಣ್ ಎಂಬುವರು ವಂಚನೆಗೊಳಗಾದ ಮಹಿಳೆ. ಇವರು ಆಗಸ್ಟ್ 27 ರಂದು OLX ಮೂಲಕ ತಾನು ಮಾರಾಟ ಮಾಡಲು ಬಯಸಿದ್ದ ಸರಕುಗಳ ವಿವರಗಳನ್ನು ಒದಗಿಸಿದ್ದರು. ಸರಕು ಖರೀದಿಸಲು ಆಸಕ್ತಿ ತೋರಿದ ವ್ಯಕ್ತಿಯೊಬ್ಬ ಉಷಾ ಅವರ ಮೊಬೈಲ್ ಸಂಖ್ಯೆಯನ್ನು ಪಡೆದುಕೊಂಡಿದ್ದಾನೆ. ಬಳಿಕ ಮಹಿಳೆಯೊಬ್ಬರು ಮೊಬೈಲ್ ಸಂಖ್ಯೆ 8602485583 ನಿಂದ ದೂರವಾಣಿ ಕರೆ ಮಾಡಿ ತಾನು ಸಾಮಾನುಗಳನ್ನು ಖರೀದಿಸುವುದಾಗಿ ಹೇಳಿ ಉಷಾ ಅವರ ಗೂಗಲ್ ಪೇ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ.
ಉಷಾ ಕಿರಣ್ ಅದೇ ಮೊಬೈಲ್ ಸಂಖ್ಯೆಯಿಂದ ಹಲವಾರು ಕ್ಯೂಆರ್ ಕೋಡ್ಗಳನ್ನು ಪಡೆದಿದ್ದಾರೆ. ಆಕೆ ಕ್ಯೂಆರ್ ಕೋಡ್ಗಳನ್ನು ತೆರೆದಾಗ ಗೂಗಲ್ ಪೇ ತೆರೆದುಕೊಂಡಿದೆ ಮತ್ತು ಆಕೆಯ ಖಾತೆಯಲ್ಲಿದ್ದ ಹಣ ವರ್ಗಾವಣೆಯಾಗಿದೆ. ಆಗಸ್ಟ್ 27 ರಂದು ಬೆಳಿಗ್ಗೆ 10.20 ರಿಂದ ಆಗಸ್ಟ್ 28 ರ ಮಧ್ಯಾಹ್ನ 12.15 ರ ನಡುವೆ ಮೂರು ಖಾತೆಗಳಿಂದ 1,28,496 ರೂ.ಗಳನ್ನು ಇತರ ಖಾತೆಗಳಿಗೆ ವರ್ಗಾಯಿಸಲಾಗಿದೆ.
ಈ ಸಂಬಂಧ ಉಡುಪಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ನೋಂದಣಿ ಸಂಖ್ಯೆ 235/2023 ಕಲಂ 66 (ಸಿ ), (ಡಿ) ಐಟಿ ಕಾಯ್ದೆ ಕಲಂ 419, 420 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆನ್ ಲೈನ್ ವಂಚಕರು ತರಹೇವಾರಿ ರೀತಿಯಲ್ಲಿ ಸಾರ್ವಜನಿಕರಿಗೆ ಪಂಗನಾಮ ಹಾಕುತ್ತಿದ್ದು, ಸಾರ್ವಜನಿಕರು ತಮ್ಮ ವೈಯಕ್ತಿಕ ಮತ್ತು ಬ್ಯಾಂಕ್ ನ ಮಾಹಿತಿಗಳನ್ನು ಯಾರ ಜೊತೆಯಲ್ಲಿಯೂ ಹಂಚದಿರುವುದು ಉತ್ತಮ.