ಬೆಂಗಳೂರು: ರಾಜಧಾನಿಯಲ್ಲಿ ಹುಟ್ಟಿಕೊಂಡ ಮೊದಲ ಯಕ್ಷಗಾನ ಮಹಿಳಾ ತಂಡ ‘ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಬೆಂಗಳೂರು’ ಈ ಸಂಸ್ಥೆಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ವತಿಯಿಂದ ಚಿಂತನ-ಮಂಥನ ಕಾರ್ಯಕ್ರಮ ನಡೆಯಿತು.
ನಂತರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕೋಟ ಶಿವರಾಮ ಕಾರಂತರು ನಿರ್ದೇಶಿಸಿದ ಯಕ್ಷಗಾನ ಬ್ಯಾಲೆ ಪ್ರದರ್ಶನ ಎಲ್ಲರ ಮನಸೂರೆಗೊಳಿಸಿತು.
ಕನ್ನಡ ಭಾಷೆಯಲ್ಲೇ ನಡೆಯುವ ಯಕ್ಷಗಾನವನ್ನು ವಿಶೇಷವಾಗಿ ಸಂಸ್ಥೆಯ ಮಕ್ಕಳಿಂದ ಆಂಗ್ಲಭಾಷೆಯಲ್ಲಿ ಕಂಸವಧೆ ಎನ್ನುವ ಯಕ್ಷಗಾನ, ತೆಂಕುತಿಟ್ಟಿನಲ್ಲಿ ಖ್ಯಾತ ಮಹಿಳಾ ಭಾಗವತರಾದ ಅಮೃತಾ ಅಡಿಗ ಇವರ ಸಿರಿಕಂಠದಲ್ಲಿ ‘ಸುದರ್ಶನ ವಿಜಯ’ ಪ್ರಸಂಗ, ಬಡಗುತಿಟ್ಟಿನ ಖ್ಯಾತ ಮಹಿಳಾ ಭಾಗವತರಾದ ಚಿಂತನಾ ಹೆಗಡೆ ಇವರ ಸಿರಿಕಂಠದಲ್ಲಿ ‘ವೀರ ಅಭಿಮನ್ಯು’ ಯಕ್ಷಗಾನ ಯಕ್ಷಪ್ರೇಮಿಗಳನ್ನು ರಂಜಿಸಿತು. ಎಲ್ಲಾ ಕಾರ್ಯಕ್ರಮಗಳು ಮಹಿಳೆಯರಿಂದಲೇ ನಡೆದಿದ್ದು ವಿಶೇಷ ಆಕರ್ಷಣೆಯಾಗಿತ್ತು
ಸಭಾಕಾರ್ಯಕ್ರಮದಲ್ಲಿ ದೂರದರ್ಶನ, ಆಕಾಶವಾಣಿಯ ನಿರ್ದೇಶಕಿ ನಿರ್ಮಲ ಎಲಿಗಾರ್, ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾ ತೇಜಸ್ವಿನಿ ಅನಂತ್ ಕುಮಾರ್, ಹಿರಿಯ ಪತ್ರಕರ್ತ ಡಾ. ಈಶ್ವರ್ ದೈತೋಟ, ದಕ್ಷಿಣ ಕನ್ನಡ ಸಂಘದ ಅಧ್ಯಕ್ಷ ರಾಮಚಂದ್ರ ಉಪಾಧ್ಯ, ವಿಕಾಸ್ ಗ್ಲೋಬಲ್ ಸೋಲ್ಯುಷನ್ಸ್ ನ ಅಧ್ಯಕ್ಷ ಡಿ.ವಿ ವೆಂಕಟಾಚಲಪತಿ, ಜಿ. ಶ್ರೀನಿವಾಸ್ ರಾವ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 14 ಯಕ್ಷಗಾನ ಗುರುಗಳಿಗೆ ‘ಕರ್ನಾಟಕ ಯಕ್ಷ ಗುರು ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಸಂಸ್ಥೆಯ ಸ್ಥಾಪಕಿ ಗೌರಿ ಕೆ ಸ್ವಾಗತಿಸಿ, ಸುಪ್ರೀತಾ ಗೌತಮ್ ಮತ್ತು ಚೈತ್ರ ಕೋಟ ಕಾರ್ಯಕ್ರಮ ನಿರೂಪಿಸಿದರು.