ಮಂಗಳೂರು: ಹೊಟೇಲಿನ ಈಜು ಕೊಳದಲ್ಲಿ ಬ್ಯಾಂಕ್‌ ಅಧಿಕಾರಿಯೊಬ್ಬರ ಮೃತದೇಹ ಪತ್ತೆ

ಮಂಗಳೂರು: ನಗರದ ಪ್ರತಿಷ್ಠಿತ ಹೊಟೇಲಿನ ಈಜು ಕೊಳದಲ್ಲಿ ಬ್ಯಾಂಕ್‌ ಅಧಿಕಾರಿಯೊಬ್ಬರ ಮೃತ ದೇಹ ಪತ್ತೆಯಾಗಿದೆ. ಮಂಗಳೂರಿನ ಪ್ರತಿಷ್ಠಿತ ಮೋತಿ ಮಹಲ್ ಹೊಟೇಲಿನ ಸ್ವಿಮ್ಮಿಂಗ್ ಪೂಲ್ ನಲ್ಲಿ ಮುಳುಗಿ‌ ಬ್ಯಾಂಕ್‌ ಅಧಿಕಾರಿ ಸಾವಿಗೀಡಾಗಿರುವ ಘಟನೆ ನಡೆದಿದೆ.

ಯೂನಿಯನ್ ಬ್ಯಾಂಕ್ ಅಧಿಕಾರಿ, ಕೇರಳದ ತಿರುವನಂತಪುರಂನಿವಾಸಿ ಗೋಪು ಆರ್ ನಾಯರ್ ಮೃತಪಟ್ಟ ವ್ಯಕ್ತಿ. ಗೋಪು ಆರ್ ನಾಯರ್ ಭಾನುವಾರದಂದು ಮಂಗಳೂರಿಗೆ ಬಂದು ಮೋತಿ ಮಹಲ್ ಹೊಟೇಲ್ ನಲ್ಲಿ ಉಳಿದು ಕೊಂಡಿದ್ದರು. ಬ್ಯಾಂಕ್ ಅಧಿಕಾರಿ ನಿನ್ನೆ ಸಂಜೆ 4 ಗಂಟೆ ವೇಳೆ ಹೊಟೇಲ್ ರೂಮ್ ನಿಂದ ಹೊರ ಹೋಗಿದ್ದರು ಎನ್ನಲಾಗಿದೆ.

ಹೊಟೇಲಿನ ಈಜುಕೊಳದಲ್ಲಿ ಮೃತದೇಹ ಪತ್ತೆಯಾಗಿದ್ದು,11ಅಡಿ ಆಳದಲ್ಲಿದ್ದ ಮೃತದೇಹವನ್ನು ಮುಳುಗು ತಜ್ಞರು ಹೊರತೆಗೆದಿದ್ದಾರೆ. ಈಜುತ್ತಿದ್ದ ಸಂದರ್ಭದಲ್ಲಿ ಮೇಲೆ ಬರಲು ಸಾಧ್ಯವಾಗದೆ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಉಳಕೊಂಡಿದ್ದ ರೂಂನಲ್ಲಿ ಮದ್ಯ ಸೇವಿಸಿ ಬಳಿಕ ಸ್ವಿಮ್ಮಿಂಗ್ ಫೂಲ್ ಗೆ ಇಳಿದಿರುವ ಅನುಮಾನವಿದೆ. ರೂಮ್ ನಲ್ಲಿ ಖಾಲಿ ಮದ್ಯ ಬಾಟಲಿ ಹಾಗೂ ಆಹಾರ ಪತ್ತೆಯಾಗಿದೆ ಎಂದು ವರದಿಯಾಗಿದೆ.

ಪಾಂಡೇಶ್ವರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.