ಬ್ರಹ್ಮಾವರ: ಆಹಾರೋದ್ಯಮಿಗಳ ಸಂಘಟನಾತ್ಮಕ ಕಾರ್ಯಕ್ರಮ ಬೇಕರ್ಸ್ ಮೀಟ್ ಸಂಪನ್ನ

ಬ್ರಹ್ಮಾವರ: ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಮತ್ತು ಮಾರಾಟಗಾರರ ಸಂಘ ಹಾಗೂ ಇಂಡಿಯನ್‌ ಬೇಕರಿ ಫೆಡರೇಶನ್‌ ಸಹಭಾಗಿತ್ವದಲ್ಲಿ ಸೆ. 10ರಂದು ಬ್ರಹ್ಮಾವರದ ಮದರ್‌ ಪ್ಯಾಲೇಸ್‌ ಸಭಾಂಗಣದಲ್ಲಿ ಜರಗಿದ “ಬೇಕರ್ಸ್‌ ಮೀಟ್‌’ ಆಹಾರೋದ್ಯಮಿಗಳ ಸಂಘಟನಾತ್ಮಕ ಕಾರ್ಯಕ್ರಮವನ್ನು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಅಂಕಿತಾಧಿಕಾರಿ ಡಾ. ಪ್ರೇಮಾನಂದ ಕೆ. ಉದ್ಘಾಟಿಸಿದರು.

ಬೇಕರಿ ಉದ್ಯಮವನ್ನು ಮತ್ತಷ್ಟು ಉನ್ನತಿಗೇರಿಸುವ ನಿಟ್ಟಿನಲ್ಲಿ ಸರಕಾರ ಹೊಸ ಕಾನೂನುಮತ್ತು ನಿಯಮಗಳನ್ನು ಜಾರಿಗೆ ತರುತ್ತಿದ್ದು ಅದನ್ನು ಪಾಲನೆ ಮಾಡುವುದು ಅನಿವಾರ್ಯವಾಗಿದೆ. ನಮ್ಮ ಆರೋಗ್ಯದ ಜತೆಗೆ ಗ್ರಾಹಕರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಬೇಕರಿ ಉದ್ಯಮವನ್ನು ಲಾಭದಾಯಕವನ್ನಾಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಬೇಕರಿ ಉದ್ಯಮದಲ್ಲಿ ತೊಡಗಿಸಿಕೊಂಡವರಿಗಾಗಿ ಮಾಹಿತಿ ಕಾರ್ಯಾಗಾರ ನಡೆಯಿತು.

ಸಮಾಜ ಸೇವಕ ವಿಶು ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು ಮತ್ತು ಅಶಕ್ತರಿಗೆ ಧನಸಹಾಯ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಇಂಡಿಯನ್‌ ಬೇಕರಿ ಫೆಡರೇಶನ್‌ ಅಧ್ಯಕ್ಷ ಪಿ. ಎನ್‌. ಶಂಕರನ್‌, ಕಾರ್ಯದರ್ಶಿ ಕೆ. ಆರ್‌. ಬಾಲನ್‌, ಸಂಚಾಲಕ ಬಾಲರಾಜ್‌ ಕೆ.ಆರ್‌., ಕೇರಳ ಬೇಕರಿ ಅಸೋಸಿಯೇಶನ್‌ ಅಧ್ಯಕ್ಷ ಕಿರಣ್‌, ಕೇಕ್‌ ತಯಾರಿಕೆಯಲ್ಲಿ ಗಿನ್ನೆಸ್‌ ದಾಖಲೆಗೈದ ರಂಜಿತ್‌, ಚಿಕ್ಕಮಗಳೂರು ಟೇಸ್ಟಿ ವರ್ಲ್ಡ್ ಫ‌ುಡ್‌ ಫ್ಯಾಕ್ಟರಿಯ ಆಡಳಿತ ನಿರ್ದೇಶಕ ಎಂ.ಎನ್‌. ಅರವಿಂದ್‌ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಅಧ್ಯಕ್ಷ ವಿಶ್ವನಾಥ್‌ ಕುಲಾಲ್‌, ಉಪಾಧ್ಯಕ್ಷ ಶ್ರೀಶನ್‌, ಹೆರಾಲ್ಡ್‌, ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್‌ ಶೆಣೈ, ಕೋಶಾಧಿಕಾರಿ ಶಶಿಕಾಂತ್‌ ಜಿ. ನಾಯಕ್‌, ಉಡುಪಿ ಜಿಲ್ಲಾ ವರ್ತಕರ ಹಿತರಕ್ಷಣ ವೇದಿಕೆಯ ಅಧ್ಯಕ್ಷ ದಿವಾಕರ್‌ ಸನಿಲ್‌ ಉಪಸ್ಥಿತರಿದ್ದರು.

ಸಂಘದ ಗೌರವಾಧ್ಯಕ್ಷ ವಾಲ್ಟರ್‌ ಸಲ್ಡಾನ ಸ್ವಾಗತಿಸಿದರು. ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರ ಮತ್ತು ಮಾರಾಟಗಾರರ ಸಹಕಾರ ಸಂಘದ ಅಧ್ಯಕ್ಷ ಶ್ರೀಧರ್‌ ಪಿ.ಎಸ್‌. ಪ್ರಸ್ತಾವಿಸಿದರು. ನವೀನ್‌ ಶೆಟ್ಟಿ ವಂದಿಸಿ, ಚಂದ್ರಕಾಂತ್‌ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.