ನವದೆಹಲಿ: ಭಾರತದಲ್ಲಿ ಐಫೋನ್ಗಳ ಜನಪ್ರಿಯತೆ ಹೆಚ್ಚಾಗುತ್ತಿದ್ದು, ಆಯಪಲ್ ತನ್ನ ಮಾರುಕಟ್ಟೆ ಪಾಲನ್ನು ಹೆಚ್ಚಿಸಿಕೊಳ್ಳುತ್ತಿದೆ.ಈಗ ಭಾರತದಲ್ಲೇ ತನ್ನ ಸ್ಮಾರ್ಟ್ಫೋನ್ಗಳನ್ನು ತಯಾರಿಸುತ್ತಿರುವ ಆಯಪಲ್ ಭಾರತದ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಶೇ 7ರಷ್ಟು ಪಾಲು ಪಡೆಯುವತ್ತ ಮುನ್ನಡೆದಿದೆ. ವರ್ಷದ ಮೊದಲಾರ್ಧದಲ್ಲಿ ಆಯಪಲ್ ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಶೇಕಡಾ 6 ರಷ್ಟು ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ ಮತ್ತು ಸೂಪರ್-ಪ್ರೀಮಿಯಂ ಸ್ಮಾರ್ಟ್ಫೋನ್ ವಿಭಾಗದಲ್ಲಿ (50,000-100,000 ರೂ.ಗಳ ನಡುವೆ ಬೆಲೆ) ಪ್ರಾಬಲ್ಯ ಸಾಧಿಸಿದೆ ಎಂದು ಮಾರುಕಟ್ಟೆ ವಿಶ್ಲೇಷಕ ಸಂಸ್ಥೆ ಸೈಬರ್ ಮೀಡಿಯಾ ರಿಸರ್ಚ್ (ಸಿಎಂಆರ್) ಅಂಕಿ ಅಂಶಗಳು ತಿಳಿಸಿವೆ.
ಹೆಚ್ಚಿದ ‘ಮೇಕ್ ಇನ್ ಇಂಡಿಯಾ’ ಉಪಕ್ರಮಗಳಿಂದಾಗಿ ಪ್ರಸಕ್ತ ತ್ರೈಮಾಸಿಕದಲ್ಲಿ ಐಫೋನ್ 15 ರಫ್ತು ಶೇಕಡಾ 65 ರಷ್ಟಿದೆ ಎಂದು ಸಿಎಂಆರ್ ಅಂದಾಜಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ದೇಶೀಯ ಐಫೋನ್ ಉತ್ಪಾದನೆ ಗಮನಾರ್ಹವಾಗಿ ಹೆಚ್ಚಾಗಿದೆ. ಆಯಪಲ್ ಐಫೋನ್ ತಯಾರಕ ಫಾಕ್ಸ್ಕಾನ್, ತಮಿಳುನಾಡು ಬಳಿಯ ಶ್ರೀಪೆರಂಬದೂರ್ ಕಾರ್ಖಾನೆಯಲ್ಲಿ ಮುಂದಿನ ತಲೆಮಾರಿನ ಐಫೋನ್ 15 ಗಳನ್ನು ಸ್ಥಳೀಯವಾಗಿ ತಯಾರಿಸುತ್ತಿದೆ. ಅಲ್ಲದೆ ಫೋನ್ ಉತ್ಪಾದನೆಯ ವೇಗವನ್ನು ಗಮನಾರ್ಹವಾಗಿ ಹೆಚ್ಚಿಸಿದೆ.
ಆಯಂಡ್ರಾಯ್ಡ್ ಫೋನ್ ಪ್ರಾಬಲ್ಯದ ಭಾರತದಲ್ಲಿ ಆಯಪಲ್ ಐಫೋನ್ಗಳು ನಿಧಾನವಾಗಿ ಪಾಲು ಹೆಚ್ಚಿಸಿಕೊಳ್ಳುತ್ತಿವೆ ಎಂದು ಇತ್ತೀಚಿನ ಅಂಕಿ ಅಂಶಗಳು ತೋರಿಸಿವೆ. ಈ ವರ್ಷದ ಮೊದಲಾರ್ಧದಲ್ಲಿ ಭಾರತದಿಂದ ರಫ್ತು ಮಾಡಲಾದ ಆಯಪಲ್ ಐಫೋನ್ಗಳ ಪ್ರಮಾಣ ಶೇಕಡಾ 68 ರಷ್ಟು (ವರ್ಷದಿಂದ ವರ್ಷಕ್ಕೆ) ಹೆಚ್ಚಾಗಿದೆ.
ಐಫೋನ್ 15 ಸರಣಿಯೊಂದಿಗೆ ಐಫೋನ್ ಮಾರಾಟದಲ್ಲಿ ಶೇಕಡಾ 25 ರಷ್ಟು ಬೆಳವಣಿಗೆಯಾಗಬಹುದು ಸಿಎಂಆರ್ ನಿರೀಕ್ಷಿಸಿದೆ. ಕಳೆದ ತ್ರೈಮಾಸಿಕದಲ್ಲಿ ಐಫೋನ್ 14 ಸರಣಿಯ ರಫ್ತು ಪ್ರಮಾಣ ಸುಮಾರು 58 ಪ್ರತಿಶತದಷ್ಟಿದ್ದರೆ, ಐಫೋನ್ 13 ಸರಣಿಯು ಸುಮಾರು 23 ಪ್ರತಿಶತದಷ್ಟಿತ್ತು.
ಹಿಂದಿನ ಆವೃತ್ತಿಯ ಐಫೋನ್ಗಳ ಮಾರಾಟದಿಂದ ಭಾರತದಲ್ಲಿ ಐಫೋನ್ಗಳ ಮಾರುಕಟ್ಟೆ ವೃದ್ಧಿಯಾಗುತ್ತಿದೆ. ಆಯಪಲ್ ತನ್ನ ಮುಂದಿನ ದೊಡ್ಡ ಜಾಗತಿಕ ಉತ್ಪನ್ನ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದೇ ಸೆಪ್ಟೆಂಬರ್ 12 ರಂದು ಬಹು ನಿರೀಕ್ಷಿತ ಐಫೋನ್ 15 ಸರಣಿಯ ಹೊಸ ಸ್ಮಾರ್ಟ್ಫೋನ್ಗಳು ಜಾಗತಿಕ ಮಾರುಕಟ್ಟೆಗೆ ಬಿಡುಗಡೆಯಾಗಲಿವೆ. ಈ ಕಾರ್ಯಕ್ರಮದಲ್ಲಿ ಹೊಸ ಆಯಪಲ್ ವಾಚ್ ಗಳನ್ನು ಸಹ ಕಂಪನಿ ಘೋಷಿಸುವ ನಿರೀಕ್ಷೆಯಿದೆ.
ಐಫೋನ್ 15ನ ಜಾಗತಿಕ ಬಿಡುಗಡೆಯ ಸಂದರ್ಭದಲ್ಲಿ ‘ಮೇಕ್ ಇನ್ ಇಂಡಿಯಾ’ ಆವೃತ್ತಿಯ ಐಫೋನ್ 15 ಯುನಿಟ್ಗಳ ಸಣ್ಣ ಸೆಟ್ ಅನ್ನು ಇತರ ದೇಶಗಳಿಗೆ ರಫ್ತು ಮಾಡುವ ಸಾಧ್ಯತೆಯಿದೆ. ಭಾರತದಲ್ಲಿನ ಇತರ ಆಯಪಲ್ ಪೂರೈಕೆದಾರರಾದ ಪೆಗಾಟ್ರಾನ್ ಮತ್ತು ವಿಸ್ಟ್ರಾನ್ (ಟಾಟಾ ಗ್ರೂಪ್ ಸ್ವಾಧೀನಪಡಿಸಿಕೊಳ್ಳುತ್ತಿದೆ) ಸಹ ಐಫೋನ್ 15 ಅನ್ನು ಆದಷ್ಟು ಬೇಗ ಅಸೆಂಬಲ್ ಮಾಡಲಿವೆ ಎಂದು ಮೂಲಗಳು ತಿಳಿಸಿವೆ.