ನವದೆಹಲಿ: ಇಲ್ಲಿ ನಡೆಯುತ್ತಿರುವ ಐತಿಹಾಸಿಕ ಜಿ-20 ಶೃಂಗಸಭೆಯು ಹಲವು ಮೊದಲುಗಳಿಗೆ ನಾಂದಿ ಹಾಡಿದೆ.ವಿಶ್ವನಾಯಕರ ಕೂಟವಾದ ಜಿ20 ಶೃಂಗವು ಭಾರತದ ಅಧ್ಯಕ್ಷತೆಯಲ್ಲಿ ಒಂದು ಭೂಮಿ, ಒಂದು ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ 112 ಘೋಷಣೆಗಳನ್ನು ಅಂಗೀಕರಿಸಿದೆ. ಇದು ಜಿ20 ಶೃಂಗಸಭೆಯ ಇತಿಹಾಸದಲ್ಲಿ ದಾಖಲೆ ಬರೆದಿದೆ. ಭಾರತದ ಅಧ್ಯಕ್ಷತೆಯಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಶೃಂಗ ಇದಾಗಿದ್ದರೆ, ವಿಶ್ವದಲ್ಲಿನ ಹಲವು ದೈತ್ಯ ಸವಾಲುಗಳು ಮತ್ತು ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯಕ್ಕಾಗಿ 73 ಸಂಕಲ್ಪಗಳನ್ನು(ರೆಸಲ್ಯೂಶನ್) ಅಂಗೀಕರಿಸಲಾಗಿದೆ. ಇದು ಈವರೆಗೂ ಯಾವುದೇ ದೇಶಗಳು ನಡೆಸಿದ ಶೃಂಗಸಭೆಯಲ್ಲಿ ಇಷ್ಟು ಪ್ರಮಾಣದ ಘೋಷಣೆಗಳಿಗೆ ಅಂಗೀಕಾರ ಸಿಕ್ಕಿಲ್ಲ.
ಇಟಲಿಯಲ್ಲಿ 2ನೇ ಅತ್ಯಧಿಕ ಘೋಷಣೆ: ಕಳೆದ ವರ್ಷ (2022)ಇಂಡೋನೇಷ್ಯಾದಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ 27 ಘೋಷಣೆಗಳು, 23 ದಾಖಲೆ ಸಹಿತ ರೆಸಲ್ಯೂಶನ್ಗಳಿಗೆ ಅಂಗೀಕಾರ ಸಿಕ್ಕಿತ್ತು. 2021 ರಲ್ಲಿ ಇಟಲಿಯಲ್ಲಿ ನಡೆದ ಜಿ20 ಶೃಂಗದಲ್ಲಿ 36 ಸಂಕಲ್ಪಗಳಿಗೆ ಅಂಗೀಕಾರ, 29 ದಾಖಲೆಗಳ ಪ್ರಸ್ತುತಿ ಸೇರಿದಂತೆ 65 ಘೋಷಣೆಗಳನ್ನು ಮಾಡಲಾಗಿತ್ತು. ಇದು ಜಿ20 ಶೃಂಗದ ಇತಿಹಾಸದಲ್ಲೇ ಅತ್ಯಧಿಕವಾಗಿತ್ತು. ಇದೀಗ ಭಾರತ ಅಧ್ಯಕ್ಷತೆಯ ಶೃಂಗವು 112 ಘೋಷಣೆಗಳನ್ನು ಹೊರಡಿಸುವ ಮೂಲಕ ಚರಿತ್ರೆ ಸೃಷ್ಟಿಸಿದೆ.
2020 ರಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ಶೃಂಗದಲ್ಲಿ 30 ಘೋಷಣೆಗಳು, 2016 ರ ಜಪಾನ್ ಶೃಂಗದಲ್ಲಿ 29, 2018 ರಲ್ಲಿ ಅರ್ಜೇಂಟೀನಾದಲ್ಲಿನ ಶೃಂಗದಲ್ಲಿ 33, 2017 ರಲ್ಲಿ ಜರ್ಮನಿಯ ಶೃಂಗದಲ್ಲಿ 22 ಘೋಷಣೆಗಳನ್ನು ಹೊರಡಿಸಲಾಗಿತ್ತು.ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗವು ಒಟ್ಟಾರೆ 112 ಘೋಷಣೆಗಳನ್ನು ಹೊರಡಿಸಿದೆ. ಅವುಗಳಲ್ಲಿ 73 ಘೋಷಣೆಗಳನ್ನು ವಿಶ್ವದ ಎಲ್ಲ ನಾಯಕರು ಅಂಗೀಕರಿಸಿದ್ದರೆ, 39 ಘೋಷಣೆಗಳನ್ನು ದಾಖಲೆಯಲ್ಲಿ ಲಗತ್ತಿಸಿ ಮಂಡಿಸಲಾಗಿದೆ. ಇವೆಲ್ಲವೂ ಮಾನ್ಯತೆ ಪಡೆದಿವೆ ಎಂಬುದು ಗಮನಾರ್ಹ.
ಇದೆಲ್ಲವನ್ನೂ ಗಮನಿಸಿದರೆ, ಒಂದು ವರ್ಷದಿಂದ ಭಾರತದಲ್ಲಿ ನಡೆಯುತ್ತಿರುವ ಹಲವು ಸಭೆಗಳು ಸಾರ್ಥಕತೆ ಪಡೆದಿವೆ ಎಂದು ಸಾರುತ್ತವೆ.
ನವದೆಹಲಿಯಲ್ಲಿ ಶೃಂಗಸಭೆಯ ಮೊದಲ ದಿನದ ಅಧಿವೇಶನ ಪ್ರಾರಂಭವಾಗುತ್ತಿದ್ದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆಫ್ರಿಕನ್ ಯೂನಿಯನ್ ಮುಖ್ಯಸ್ಥರನ್ನು ಜಿ20 ಕಾಯಂ ಸದಸ್ಯರಾಗಿ ಘೋಷಿಸಿದರು. ಯೂನಿಯನ್ ಆಫ್ ಕೊಮೊರೊಸ್ ಅಧ್ಯಕ್ಷ ಮತ್ತು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರು ಜಿ20 ಯ ಕಾಯಂ ಸದಸ್ಯ ಸ್ಥಾನ ಅಲಂಕರಿಸಿದರು.












