ನವದೆಹಲಿ: ದೇಶದಲ್ಲಿ ಆನ್‌ಲೈನ್ ಪಾವತಿಯಲ್ಲಿ ಕ್ರಾಂತಿಯನ್ನುಂಟು ಮಾಡಿರುವ ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್ (ಯುಪಿಐ) ಇದೀಗ ತನ್ನ ಅದ್ಭುತ ವೈಶಿಷ್ಟ್ಯಗಳೊಂದಿಗೆ ದೇಶದ ಎಟಿಎಂ ವಹಿವಾಟಿನ ಚಿತ್ರಣವನ್ನು ಬದಲಾಯಿಸಲು ಮುಂದಾಗಿದೆ.ಬ್ಯಾಂಕ್ ಆಫ್ ಬರೋಡಾ ದೇಶದಾದ್ಯಂತ 6000 ಕ್ಕೂ ಹೆಚ್ಚು ಎಟಿಎಂಗಳಲ್ಲಿ ಯುಪಿಐ ಸೌಲಭ್ಯವನ್ನು ಪ್ರಾರಂಭಿಸಿದೆ. ಈ ಮೂಲಕ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
UPI-ATM ನಿಂದ ವಿತ್ಡ್ರಾ ಹೇಗೆ?: UPI-ATM ಬಳಸುವುದು ತುಂಬಾ ಸುಲಭ. ಇದು ಹೆಚ್ಚು ಸುರಕ್ಷಿತವಾಗಿದೆ ಎಂದು ಹಿಟಾಚಿ ಪೇಮೆಂಟ್ ಸರ್ವಿಸಸ್ ಸಿಇಒ ಸುಮಿಲ್ ವಿಕುಮ್ಸೆ ಹೇಳಿದ್ದಾರೆ. ಯುಪಿಐ ಎಟಿಎಂನಲ್ಲಿ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಲು ನಿಮಗೆ ಡೆಬಿಟ್ ಕಾರ್ಡ್ ಅಗತ್ಯವಿಲ್ಲ. ಈ ಎಟಿಎಂ ನಿಮಗೆ ಕಾರ್ಡ್ ರಹಿತವಾಗಿ ನಗದು ವಿತ್ಡ್ರಾ ಮಾಡುವ ಸೌಲಭ್ಯವನ್ನು ನೀಡುತ್ತದೆ. ಇದು ವೈಟ್ ಲೇಬಲ್ ಎಟಿಎಂ ಆಗಿದೆ. ವೈಟ್ ಲೇಬಲ್ ಎಟಿಎಂಗಳು ಬ್ಯಾಂಕಿಂಗ್ಯೇತರ ಸಂಸ್ಥೆಗಳ ಒಡೆತನದಲ್ಲಿವೆ. ಈ ಎಟಿಎಂಗಳಲ್ಲಿ ಗ್ರಾಹಕರು ಯಾವುದೇ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಇಲ್ಲದೆಯೇ ತಮ್ಮ ಯುಪಿಐ ಖಾತೆಗಳನ್ನು ಬಳಸಿಕೊಂಡು ಸುಲಭವಾಗಿ ನಗದು ಪಡೆಯಬಹುದಾಗಿದೆ. ಈ ಯುಪಿಐ ಮೂಲಕ ಎಟಿಎಂನಿಂದ ಹಣ ಡ್ರಾ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ..
* ATM ಸ್ಕ್ರೀನ್ ಮೇಲೆ ‘UPI ಕಾರ್ಡ್‌ಲೆಸ್ ಕ್ಯಾಶ್’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ..
* ನೀವು ವಿತ್ಡ್ರಾ ಮಾಡಿಕೊಳ್ಳಬೇಕಾಗಿರುವ ಮೊತ್ತವನ್ನು ಆಯ್ಕೆ ಮಾಡಿಕೊಳ್ಳಿ..
* ಆಗ ಎಟಿಎಂ ಸ್ಕ್ರೀನ್ ಮೇಲೆ ತಕ್ಷಣವೇ ನಿಮಗೊಂದು QR ಕೋಡ್ ಕಾಣಿಸುತ್ತದೆ..
* ಫೋನ್‌ನಲ್ಲಿರುವ UPI ಆಧಾರಿತ ಅಪ್ಲಿಕೇಶನ್‌ನೊಂದಿಗೆ ಅದನ್ನು ಸ್ಕ್ಯಾನ್ ಮಾಡಬೇಕು..
* ನಿಮ್ಮ ವಹಿವಾಟನ್ನು ಖಚಿತಪಡಿಸಲು ಅಪ್ಲಿಕೇಶನ್‌ನಲ್ಲಿ UPI ಪಿನ್ ನಮೂದಿಸಬೇಕು..
* ಪರಿಶೀಲನೆ ಮುಗಿದ ತಕ್ಷಣ ಎಟಿಎಂ ಯಂತ್ರದಿಂದ ಹಣ ಹೊರಬರುತ್ತದೆ..
* ಬಳಿಕ ನಿಮ್ಮ ವಹಿವಾಟು ಯಶಸ್ವಿಯಾಗಿದೆ ಎಂಬ ಸಂದೇಶವೂ ಆಯಪ್‌ನಲ್ಲಿ ಕಂಡು ಬರುತ್ತದೆ.
ಸರ್ಕಾರಿ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (BOB) ಶುಕ್ರವಾರ ದೇಶಾದ್ಯಂತ 6000 ಎಟಿಎಂಗಳಲ್ಲಿ UPI ಆಧಾರಿತ ಸೇವೆಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಎನ್‌ಸಿಆರ್ ಕಾರ್ಪೊರೇಶನ್‌ನ ಸಹಯೋಗದೊಂದಿಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಸೌಜನ್ಯದಿಂದ ಯುಪಿಐ ಎಟಿಎಂಗಳನ್ನು ಪ್ರಾರಂಭಿಸಿದ ಮೊದಲ ಸಾರ್ವಜನಿಕ ವಲಯದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಬಿಒಬಿ ಪಾತ್ರವಾಗಿದೆ. ಅಷ್ಟೇ ಅಲ್ಲ, UPI ATM ನ ಈ ವೈಶಿಷ್ಟ್ಯವು ಭಾರತದ ಭವಿಷ್ಯದ ಫಿನ್‌ಟೆಕ್‌ನ ಉಜ್ವಲ ಭವಿಷ್ಯದ ಪ್ರಾರಂಭವಾಗಿದೆ.
ಈ ಸೌಲಭ್ಯದ ನಂತರ ಬ್ಯಾಂಕ್ ಗ್ರಾಹಕರು ಮತ್ತು ಇತರ ಬ್ಯಾಂಕ್‌ಗಳ ಗ್ರಾಹಕರು ಡೆಬಿಟ್ ಕಾರ್ಡ್‌ನ ಅಗತ್ಯವಿಲ್ಲದೇ ಯಾವುದೇ UPI ಆಧಾರಿತ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ BOB UPI ಎಟಿಎಂಗಳಿಂದ ಹಣವನ್ನು ವಿತ್ಡ್ರಾ ಮಾಡಿಕೊಳ್ಳಬಹುದಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ಕ್ಯೂಆರ್ ಕೋಡ್ ಆಧಾರಿತ ನಗದು ಪಡೆಯುವಿಕೆಯನ್ನು ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ಪಡೆಯುವ ತಂತ್ರಜ್ಞಾನದೊಂದಿಗೆ ಮಾಡಲಾಗುತ್ತದೆ ಎಂದು ಅದು ವಿವರಿಸಿದೆ. ಈ ಎಟಿಎಂಗಳು ಯುಪಿಐಗೆ ಲಿಂಕ್ ಮಾಡಲಾದ ಬಹು ಖಾತೆಗಳಿಂದ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ಹೊಂದಿವೆ ಎಂದು ಬಿಒಬಿ ಹೇಳಿದೆ.