ಹೈದರಾಬಾದ್: ನಾಟಕೀಯ ಬೆಳವಣಿಗೆಯಲ್ಲಿ, ಆಂಧ್ರ ಪ್ರದೇಶದ ಸಿಐಡಿ ಪೊಲೀಸರು ಸೆಪ್ಟೆಂಬರ್ 9 ರಂದು ತೆಲುಗು ದೇಶಂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರನ್ನು ಕರ್ನೂಲ್‌ನಿಂದ 65 ಕಿಮೀ ದೂರದಲ್ಲಿರುವ ನಂದ್ಯಾಲ್‌ನಲ್ಲಿ ಬಂಧಿಸಿದ್ದಾರೆ.
ಆಂಧ್ರ ಪ್ರದೇಶದ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್‌ನಲ್ಲಿನ ಭ್ರಷ್ಟಾಚಾರದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ, ಪೊಲೀಸರು ಶುಕ್ರವಾರ ಮಧ್ಯರಾತ್ರಿಯಿಂದಲೇ ಕರ್ನೂಲ್, ನಂದ್ಯಾಲ್ ಮತ್ತು ಅನಂತಪುರ ಜಿಲ್ಲೆಗಳಿಂದ ಹಲವಾರು ಬಸ್‌ಗಳಲ್ಲಿ ಭಾರಿ ಪೊಲೀಸ್ ಪಡೆಗಳನ್ನು ನಿಯೋಜಿಸಲು ಪ್ರಾರಂಭಿಸಿದ್ದರು. ಸುಮಾರು 5.00 ಗಂಟೆಗೆ (ಶನಿವಾರ), ನಂದ್ಯಾಲ್‌ನ ಫಂಕ್ಷನ್ ಹಾಲ್‌ನಲ್ಲಿ ನೆಲೆಸಿದ್ದ ನಾಯ್ಡು ಅವರ ಪ್ರಚಾರ ವಾಹನದತ್ತ ತೆರಳಿ ನಾಯ್ಡು ಅವರ ವಾಹನವನ್ನು ಸುತ್ತುವರೆದಿರುವ ಎಲ್ಲಾ ಟಿಡಿಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಳಿಕ ಎನ್‌ಎಸ್‌ಜಿ ಗಾರ್ಡ್‌ಗಳಿಗೆ ತಿಳಿಸಿದ್ದಾರೆ. ನಾಯ್ಡು ಅವರು ವಾಹನದಿಂದ ಇಳಿದಾಗ, ಸಿಐಡಿ ಪೊಲೀಸರು ನಾಯ್ಡು ಅವರಿಗೆ ಬಂಧನ ನೋಟಿಸ್ ಹಸ್ತಾಂತರಿಸಿ ಅದರ ಸ್ವೀಕೃತಿಯನ್ನು ಪಡೆದು ಅವರನ್ನು ಬಂಧಿಸಿದ್ದಾರೆ.
ಅಪರಾಧ ಸಂಖ್ಯೆ 29/2021 ಕ್ಕೆ ಸಂಬಂಧಿಸಿದಂತೆ IPC ಯ ಕಲಂ 120 (B) 166, 167, 41b, 420, 465, 468, 471, 409 201, 109 r/w 34 ಮತ್ತು 37 ರ ಅಡಿಯಲ್ಲಿ ಮತ್ತು 1968 ರ ಭ್ರಷ್ಟಾಚಾರ ತಡೆ ಕಾಯಿದೆಯ ಸೆಕ್ಷನ್ 12, 13 (2) r/w 13 (1) (c) ಮತ್ತು (d) ಅಡಿಯಲ್ಲಿ ಬಂಧನವನ್ನು ಕೈಗೊಳ್ಳಲಾಗಿದೆ.
ಬಂಧನದ ಸಮಯದಲ್ಲಿ ನಾಯ್ಡು ಸಿಐಡಿ ಪೊಲೀಸರ ಜೊತೆ ತೀವ್ರ ವಾಗ್ವಾದ ನಡೆಸಿದ್ದಾರೆ. ನಾಯ್ಡು ಅವರು ಯಾವುದೇ ಅಪರಾಧ ಮಾಡಿಲ್ಲ ಎಂದು ಪ್ರತಿಪಾದಿಸಿದ್ದಾರೆ. ವೈಎಸ್‌ಆರ್‌ಸಿಪಿ ಸರ್ಕಾರವು ಟಿಡಿಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಮತ್ತು ಪ್ರಜಾಪ್ರಭುತ್ವ ಶಕ್ತಿಗಳನ್ನು ನಿರ್ದಯವಾಗಿ ದಮನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.