ಉಡುಪಿ: ಜಿಲ್ಲೆಯಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವದ ಭರದ ಸಿದ್ಧತೆ ನಡೆದಿದೆ. ಪೊಡವಿಗೊಡೆಯನ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲು ಎಲ್ಲರೂ ಸಿದ್ದರಾಗುತ್ತಿದ್ದಾರೆ. ಉಡುಪಿಯ ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷ ಆಕರ್ಷಣೆ ರಂಗು ಬಿರಂಗಿ ವೇಷ ಭೂಷಣಗಳು ಮತ್ತು ಭರ್ಜರಿ ಹುಲಿ ಕುಣಿತಗಳು.
ಶ್ರೀಕೃಷ್ಣ ಜನ್ಮಾಷ್ಟಮಿಯ ವೇಷ ಎಂದಾಗ ನೆನಪಾಗುವವರೆ ರವಿ ಕಟಪಾಡಿ. ಈ ಬಾರಿ ರವಿ ಯಾವ ವೇಷ ಧರಿಸಲಿದ್ದಾರೆ ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಈ ಬಾರಿ ಸಮಾಜ ಸೇವಕ ರವಿ ಕಟಪಾಡಿ ವಿಶಿಷ್ಟ ವೇಷಭೂಷಣ ತೊಡಲಿದ್ದಾರೆ. ಇಂಗ್ಲಿಷ್ ಸಿನಿಮಾವೊಂದರ ಸಮುದ್ರ ಜೀವಿಯ ವೇಷವನ್ನು ಅವರು ತೊಡಲಿದ್ದಾರೆ. ರವಿ ಕಟಪಾಡಿ ಗೆಳೆಯರ ತಂಡದೊಂದಿಗೆ ಉದ್ಯಾವರ, ಉಡುಪಿ, ಮಲ್ಪೆ, ಪಡುಕೆರೆ ಮತ್ತಿತರ ಪ್ರದೇಶಗಳಲ್ಲಿ ಸಂಚರಿಸಲಿದ್ದಾರೆ.
ಈ ವರ್ಷ ರವಿ ಕುಂದಾಪುರದ ಎರಡು ವರ್ಷದ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಆದರೆ, ಈ ವರ್ಷ ರವಿ ಕಟಪಾಡಿ ಫ್ರೆಂಡ್ಸ್ ಟೀಮ್ ಬಾಕ್ಸ್ ಹಿಡಿದು ಜನರ ಬಳಿ ಹಣ ಕೇಳುವುದಿಲ್ಲ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ಕಳೆದ ಎಂಟು ವರ್ಷಗಳಲ್ಲಿ ನಾನು 113 ಕ್ಕೂ ಹೆಚ್ಚು ಮಕ್ಕಳಿಗೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಆರ್ಥಿಕ ಸಹಾಯ ಮಾಡಿದ್ದೇನೆ. ಈ ಸತ್ಯದ ಬಗ್ಗೆ ನನಗೆ ಅಪಾರ ತೃಪ್ತಿ ಇದೆ. 47 ವರ್ಷಗಳ ನಂತರ ಸ್ವಂತ ಮನೆ ಕಟ್ಟಲು ಆರಂಭಿಸಿದ್ದೇನೆ. ಆದರೆ, ಅಷ್ಟಮಿ ವೇಷಭೂಷಣ ಪ್ರದಾನ ಮಾಡಿ ಬಂದ ಹಣದಲ್ಲಿಯೇ ಮನೆ ಕಟ್ಟುತ್ತಿದ್ದೇನೆ ಎಂದು ನನ್ನದೇ ಗ್ರಾಮದ ಕೆಲವರು ಆರೋಪ ಮಾಡುತ್ತಿದ್ದಾರೆ. ಹಾಗಾಗಿ ಈ ವರ್ಷ ನಾನು ವೇಷಭೂಷಣ ತೊಟ್ಟರೂ ನಮ್ಮ ತಂಡ ಸಾರ್ವಜನಿಕರಿಂದ ಹಣ ಸಂಗ್ರಹಿಸುವುದಿಲ್ಲ. ಯಾರಾದರೂ ನಮಗೆ ಸಹಾಯ ಮಾಡಲು ಸಿದ್ಧರಿದ್ದರೆ, ಅವರು ನಮ್ಮ ವಾಹನವನ್ನು ಸಮೀಪಿಸುವ ಮೂಲಕ ಸಹಾಯ ಮಾಡಬಹುದು. ಇದು ರವಿ ಫ್ರೆಂಡ್ಸ್ ಕಟಪಾಡಿ ತಂಡದ ನಿರ್ಧಾರ ಎಂದಿದ್ದಾರೆ.
ತಂಡದ ಮಾರ್ಗದರ್ಶಕರಾದ ಮಹೇಶ್ ಶೆಣೈ, ಮಹಮ್ಮದ್ ರಮೀಜುಲ್ಲಾ ಮತ್ತು ವಿಶ್ವಾಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.