ಜಿಂಬಾಬ್ವೆ ಕ್ರಿಕೆಟಿಗ ಹೀತ್ ಸ್ಟ್ರೀಕ್ ಕ್ಯಾನ್ಸರ್​ನಿಂದ ಬಳಲಿ ನಿಧನ

ಬುಲವಾಯೊ: ಜಿಂಬಾಬ್ವೆ ಕ್ರಿಕೆಟ್​​ ಪರ ಟೆಸ್ಟ್​​ನಲ್ಲಿ ಶತಕ ವಿಕೆಟ್​ ಗಳಿಸಿದ ದಿಗ್ಗಜ ಆಲ್​ರೌಂಡರ್​ ಆಟಗಾರ ಹೀತ್ ಸ್ಟ್ರೀಕ್ ನಿಧನರಾಗಿದ್ದಾರೆಕ್ಯಾನ್ಸರ್​ನಿಂದ ಬಳಲುತ್ತಿದ್ದ ಅವರು 49ನೇ ವಯಸ್ಸಿಗೆ ಇಹಲೋಕವನ್ನು ತ್ಯಜಿಸಿದ್ದಾರೆ. ಹೀತ್ ಸ್ಟ್ರೀಕ್ ಮರಣದ ಸುದ್ದಿಯಲ್ಲಿ ಅವರ ಪತ್ನಿ ನಾಡಿನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡುವ ಮೂಲಕ ತಿಳಿಸಿದ್ದಾರೆ. ಜಿಂಬಾಬ್ವೆಯ ಮಾಜಿ ನಾಯಕನ ಅಗಲಿಕೆಗೆ ಕ್ರಿಕೆಟ್​ ಜಗತ್ತು ಕಂಬನಿ ಮಿಡಿದಿದೆ..ಜಿಂಬಾಬ್ವೆ ಕ್ರಿಕೆಟ್​ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ಕ್ಯಾನ್ಸರ್​ನಿಂದಾಗಿ ನಿಧನರಾಗಿದ್ದಾರೆ.

ಹೀತ್ ಸ್ಟ್ರೀಕ್ ಪತ್ನಿ ನಾಡಿನ್ ತಮ್ಮ ಫೇಸ್​ ಬುಕ್​ ಖಾತೆಯಲ್ಲಿ “ಸೆಪ್ಟೆಂಬರ್ 3, 2023ರ ಭಾನುವಾರದ ಮುಂಜಾನೆ, ನನ್ನ ಜೀವನದ ಪ್ರೀತಿ ಮತ್ತು ನನ್ನ ಮಕ್ಕಳ ತಂದೆಯನ್ನು ದೇವತೆಗಳು ಕರೆದೊಯ್ದರು. ತನ್ನ ಕೊನೆಯ ದಿನಗಳನ್ನು ಕುಟುಂಬ ಮತ್ತು ಹತ್ತಿರದ ಪ್ರೀತಿಪಾತ್ರದವರೊಂದಿಗೆ ಅವರು ಕಳೆದಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಸ್ಟ್ರೀಕ್ ಅವರು ಕೊಲೊನ್ ಮತ್ತು ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಮತ್ತು ಜೋಹಾನ್ಸ್ ಬರ್ಗ್ ಆಸ್ಪತ್ರೆಯಲ್ಲಿ ದೀರ್ಘಕಾಲದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಹೆನ್ರಿ ಒಲೊಂಗಾ ಅವರು ಮಾಡಿದ್ದ ಎಕ್ಸ್​ ಖಾತೆಯಲ್ಲಿ ಹೀತ್ ಸ್ಟ್ರೀಕ್ ಮರಣ ಹೊಂದಿದ್ದಾರೆ ಎಂದು ಪೋಸ್ಟ್​ ಮಾಡಿ ನಂತರ ಅದು ಸುಳ್ಳು ಸುದ್ದಿ ಎಂದು ಅವರೇ ಸ್ಪಷ್ಟನೆಯನ್ನೂ ಕೊಟ್ಟಿದ್ದರು. ಅಂದು ಅವರ ನಿಧನದ ಸುದ್ದಿಗಳು ಹರಿದಾಡಿದ್ದವು

ಸ್ಟ್ರೀಕ್ 2000 ಮತ್ತು 2004 ರ ನಡುವೆ ಜಿಂಬಾಬ್ವೆಯ ನಾಯಕರಾಗಿದ್ದರು ಮತ್ತು 65 ಟೆಸ್ಟ್ ಮತ್ತು 189 ಏಕದಿನಗಳನ್ನು ಆಡಿದ್ದಾರೆ. ಅವರು 100 ಟೆಸ್ಟ್ ವಿಕೆಟ್‌ಗಳನ್ನು ಪಡೆದ ತಮ್ಮ ದೇಶದ ಏಕೈಕ ಆಟಗಾರರಾಗಿದ್ದಾರೆ ಮತ್ತು ಅವರ 12 ವರ್ಷಗಳ ವೃತ್ತಿಜೀವನದಲ್ಲಿ ಏಕಾಂಗಿ ಜಿಂಬಾಬ್ವೆ ಬೌಲಿಂಗ್ ಘಟಕವನ್ನು ನಡೆಸಿದ್ದರು.

ಮುಖ್ಯವಾಗಿ ತನ್ನ ವೇಗದ ಬೌಲಿಂಗ್ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದರೂ, ಸ್ಟ್ರೀಕ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ಗೂ ಕೊಡುಗೆ ನೀಡಿದ್ದಾರೆ. ಅವರ ವೃತ್ತಿಜೀವನದಲ್ಲಿ 1990 ಟೆಸ್ಟ್ ಮತ್ತು 2943 ಏಕದಿನ ರನ್‌ಗಳನ್ನು ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಹರಾರೆಯಲ್ಲಿ ನಡೆದ ಪಂದ್ಯದಲ್ಲಿ ತಮ್ಮ ಮೊದಲ ಮತ್ತು ಏಕೈಕ ಟೆಸ್ಟ್ ಶತಕ (127*) ಗಳಿಸಿದರು. 1993 ರಲ್ಲಿ ಪಾಕಿಸ್ತಾನದ ವಿರುದ್ಧದ ಅವರು ತಮ್ಮ ಚೊಚ್ಚಲ ಪಂದ್ಯವನ್ನಾಡಿದರು. ಈ ಪಂದ್ಯದಲ್ಲಿ ಅವರು ಎಂಟು ವಿಕೆಟ್​ ಗಳಿಸಿದ್ದರು.

2006 ರಲ್ಲಿ ಎರಡು ವರ್ಷಗಳ ಒಪ್ಪಂದದ ಅಡಿಯಲ್ಲಿ ವಾರ್ವಿಕ್‌ಷೈರ್‌ನ ನಾಯಕನಾಗಿ ಆಡಿದರು. ಸ್ಟ್ರೀಕ್ 2005 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. 2007 ರಲ್ಲಿ ಇಂಡಿಯನ್ ಕ್ರಿಕೆಟ್ ಲೀಗ್ (ICL)ನಲ್ಲಿ ಆಡಿದ್ದಾರೆ. ಜಿಂಬಾಬ್ವೆ, ಸ್ಕಾಟ್ಲೆಂಡ್, ಬಾಂಗ್ಲಾದೇಶ, ಗುಜರಾತ್ ಲಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್​ಗೆ ಸ್ಟ್ರೀಕ್ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು. 2021 ರಲ್ಲಿ ಐಸಿಸಿ ಭ್ರಷ್ಟಾಚಾರ-ವಿರೋಧಿ ನಿಯಮ ಉಲ್ಲಂಘನೆಗಾಗಿ ಐಸಿಸಿ ಅವರನ್ನು ಎಂಟು ವರ್ಷಗಳ ಕಾಲ ನಿಷೇಧಕ್ಕೊಳಪಡಿಸಿತ್ತು.