ಮಂಡ್ಯ : ಮಂಡ್ಯ ಜಿಲ್ಲೆಯಲ್ಲಿ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆಗಳು ಮುಂದುವರಿದಿವೆ.ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕಾವೇರಿ ಹೋರಾಟ ವಿವಿಧ ರಂಗು ಪಡೆಯುತ್ತಿದೆ.
ಬೆಂಗಳೂರಿನಿಂದ ಆಗಮಿಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಜಿಲ್ಲೆಯ ಸಂಜಯ ವೃತ್ತದಲ್ಲಿ ಜಮಾಯಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಬಿಜೆಪಿ ಕಾರ್ಯಕರ್ತರು ಕಾವೇರಿ ಪ್ರತಿಮೆಗೆ ಪೂಜೆ ಮಾಡಿ ವಿನೂತನವಾಗಿ ಅಪ್ಪಿಕೋ ಚಳವಳಿ ಮಾಡಿದರು. ಇನ್ನು ಕೆಆರ್ಎಸ್ ನಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕಳೆದ ಒಂದು ವಾರದಿಂದ ಆಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.ಒಂದಿಲ್ಲೊಂದು ರೀತಿಯಲ್ಲಿ ಹೋರಾಟಗಳನ್ನು ನಡೆಯುತ್ತಿವೆ. ಪ್ರತಿ ನಿತ್ಯ ತಮಿಳುನಾಡಿಗೆ ನೀರನ್ನು ಹರಿಸುತ್ತಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಭಾನುವಾರ ಕೂಡ ರಸ್ತೆಗಿಳಿದ ಸಂಘಟನೆಗಳು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಭೂಮಿ ತಾಯಿ ಹೋರಾಟ ಸಮಿತಿಯಿಂದ ಪ್ರತಿಭಟನೆ ಕೈಗೊಂಡಿದ್ದಾರೆ. ಇತ್ತ ಮಂಡ್ಯದಲ್ಲಿ ಜಿಲ್ಲಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಕನ್ನಡಸೇನೆ ಫ್ಯಾಕ್ಟರಿ ವೃತ್ತದಿಂದ ಬೈಕ್ ರ‍್ಯಾಲಿ ನಡೆಸಿ ರಸ್ತೆ ತಡೆ ನಡೆಸಿದರಲ್ಲದೆ ಸರ್ಕಾರ ನಮ್ಮ ತಲೆ ಮೇಲೆ ಚಪ್ಪಡಿ ಕಲ್ಲು ಎಳೆದಿದೆ ಎಂದು ತಲೆ ಮೇಲೆ ಕಲ್ಲು ಹೊತ್ತು ಧಿಕ್ಕಾರ ಕೂಗಿದರು.
ಹೋರಾಟಗಾರರಾದ ಕನ್ನಡ ಪ್ರಕಾಶ್ ಪ್ರತಿಕ್ರಿಯಿಸಿ, ಕಳೆದ ಒಂದು ವಾರದಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಲು ನಮ್ಮ ಕನ್ನಡಪರ ಸಂಘಟನೆ ಕಾರ್ಯಕರ್ತರು ಕೆಆರ್ಎಸ್ ಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಸಿದ್ದರಾಮಯ್ಯ ಸರ್ಕಾರ, ಹೋರಾಟವನ್ನು ಹತ್ತಿಕ್ಕಲು ನಮ್ಮನ್ನು ಬಂಧಿಸಿದ್ದರು. ಬಿಜೆಪಿ ಕಾರ್ಯಕರ್ತ ಶಿವಕುಮಾರ್ ಆರಾಧ್ಯ ಮಾತನಾಡಿ, ಅಪ್ಪಿಕೊ ಚಳವಳಿಯ ಉದ್ದೇಶವೆನೆಂದರೆ ಕಾವೇರಿ ತಾಯಿ ತಮಿಳುನಾಡಿಗೆ ಹೋಗದೆ, ಕರ್ನಾಟಕದಲ್ಲೇ ಇರು ಮತ್ತು ಕೊಡಗು, ಮಡಿಕೇರಿಯಲ್ಲಿ ಮಳೆಯಾಗಿ ಕನ್ನಂಬಾಡಿ ತುಂಬಿ ಮಂಡ್ಯ ರೈತರಿಗೆ ಆಧಾರವಾಗು ಎಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಬೇಡಿಕೊಂಡಿದ್ದೇವೆ. ಈಗಾಗಲೇ ನೀರನ್ನು ಬಿಡುತ್ತಿರುವ ಕಾಂಗ್ರೆಸ್ ಸರ್ಕಾರ ಅದಷ್ಟ ಬೇಗ ನೀರನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.ಈಗಲೂ ಕಾಲ ಮಿಂಚಿಲ್ಲ, ಮಾಜಿ ಸಿಎಂ ಬಂಗಾರಪ್ಪ ತೆಗೆದುಕೊಂಡ ನಿರ್ಧಾರವನ್ನು ತೆಗೆದುಕೊಳ್ಳಿ. ಮುಂದಿನ ದಿನಗಳಲ್ಲಿ ನಮಗೆ ಏನಾದರೂ ಚಿಂತೆ ಇಲ್ಲ. ನಮ್ಮ ರಾಜ್ಯದ ರೈತರನ್ನು ಕಾಪಾಡುತ್ತೇವೆ ಎಂದರು.
ಕನ್ನಡಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ತಮಿಳುನಾಡಿಗೆ ನೀರನ್ನು ಹರಿಸಿ ಸರ್ಕಾರ ನಮ್ಮ ತಲೆ ಮೇಲೆ ಚಪ್ಪಡಿ ಎಳೆದಿದೆ. ರೈತರ ಹಿತಾಸಕ್ತಿ ಕಾಪಾಡುತ್ತೇವೆ ಎನ್ನುವ ಸರ್ಕಾರ ಕದ್ದು ಮುಚ್ಚಿ ನೀರನ್ನು ಬಿಡುತ್ತಿರುವುದು ಏಕೆ? ಎಂದು ಪ್ರಶ್ನಿಸಿದರು. ಬೆಳೆ ಹಾಗು ಕುಡಿಯುವ ನೀರಿಗೆ ಹಾಹಾಕಾರ ಬಂದಿದೆ. ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ್ದೇವೆ. ಇದೀಗ ಮತ್ತೆ ಅದೆ ಪರಿಸ್ಥಿತಿಗೆ ಸರ್ಕಾರ ರೈತರನ್ನು ತಂದಿದೆ. ಮಂಡ್ಯ ಜಿಲ್ಲೆಗೆ 100 ಕೋಟಿ ಅನುದಾನುವನ್ನು ಬಿಡುಗಡೆ ಮಾಡಬೇಕು. ನೀರನ್ನು ನಿಲ್ಲಿಸಬೇಕು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮತ್ತೊಂದೆಡೆ ರೈತ ನಾಯಕಿ ಸುನಂದಾ ಜಯರಾಂ ಮಾತನಾಡಿ, ರಾಜ್ಯ ಸರ್ಕಾರ ಪ್ರಧಿಕಾರದ ಆದೇಶವೆಂದು ಅಣೆಕಟ್ಟೆಗಳಲ್ಲಿ ನೀರಿಲ್ಲದ ಸಮಯದಲ್ಲಿ ಇರುವಂತ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ರೈತ ಹಿತ ರಕ್ಷಣಾ ಸಮಿತಿ ವತಿಯಿಂದ ಧರಣಿಯನ್ನು ಹಮ್ಮಿಕೊಂಡಿದ್ದೇವೆ. ನಾಲ್ಕು ದಿನಗಳಿಂದ ನಡೆಯುತ್ತಿರುವ ಈ ಪ್ರತಿಭಟನೆಗೆ ರಾಜ್ಯದ ವಿವಿಧ ಸಂಘಟನೆಗಳು, ಹಾಲಿ, ಮಾಜಿ ಜನಪ್ರತಿನಿಧಿಗಳು ಬಂದು ಬೆಂಬಲ ಕೊಡುತ್ತಿದ್ದಾರೆ. ಕಾವೇರಿ ನೀರಿನ ವಿಚಾರ ನಮಗೆ ಸಮಸ್ಯೆಯಾಗಿ ಕಾಡುತ್ತಿದೆ. ಅದಷ್ಟು ಬೇಗ ನೀರನ್ನು ನಿಲ್ಲಿಸಬೇಕು. ಮಳೆ ಸಮಯದಲ್ಲಿ ಬಿಟ್ಟು ಹರಿದು ಹೋಗುವ ನಿರನ್ನು ತಮಿಳುನಾಡು ಯಾವುದೇ ಕಾರಣಕ್ಕೂ ಸಂರಕ್ಷಣೆ ಮಾಡಿ ಮರು ಬಳಕೆ ಮಾಡಿಕೊಳ್ಳುವ ಯೋಚನೆ ಮಾಡುತ್ತಿಲ್ಲ. ಹೀಗಾಗಿ ಇಲ್ಲಿನ ರೈತರಿಗೆ ನೀರಿಲ್ಲದೆ ಸಾಕಷ್ಟ ಸಮಸ್ಯೆಯಾಗುತ್ತಿದೆ. ಸರ್ಕಾರ ಈ ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದರು.