ಉಡುಪಿ: ಪಾಣರ ಸಮಾಜದವರು ದೈವಾರಾಧಾನೆಯನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ, ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುವ ಕೆಲಸ ಮಾಡಬೇಕು ಎಂದು ಚಿತ್ರನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ರು.
ಉಡುಪಿ ಜಿಲ್ಲಾ ಪಾಣ ಯಾನೆ ನಲಿಕೆಯವರ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಉಡುಪಿ ಕೃಷ್ಣಮಠ ಪರ್ಯಾಯ ಕೃಷ್ಣಾಪುರ ಮಠದ ಸಹಕಾರದೊಂದಿಗೆ ನಗರದ ರಾಜಾಂಗಣದಲ್ಲಿ ಇಂದು ಆಯೋಜಿಸಿದ ಜಿಲ್ಲಾ ಪಾಣರ ಸಂಘದ ವಾರ್ಷಿಕೋತ್ಸವ ಸಮಾರಂಭ ಮತ್ತು ಸಮಾವೇಶದಲ್ಲಿ ಸಮಾಜದ ಹಿರಿಯರನ್ನು ಸನ್ಮಾನಿಸಿ ಮಾತನಾಡಿದರು.
ಈ ಸಮಾಜದ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಅದಕ್ಕೆ ಏನೇ ಸಹಾಯ ಬೇಕಾದ್ರೂ ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಿ. ಅದರ ಜೊತೆ ಜೊತೆಗೆ ನಮ್ಮ ಆಚಾರ ವಿಚಾರ, ಸಂಸ್ಕೃತಿ, ದೈವಾರಾಧನೆ ಇದೆಲ್ಲವನ್ನು ಮುಂದುವರಿಸಿಕೊಂಡು ಹೋಗುವಂತಾಗಬೇಕು. ಆಗ ಮಾತ್ರ ಅದ್ಭುತ ಸಮಾಜ ಕಟ್ಟಲು ಸಾಧ್ಯ ಎಂದ್ರು.
ಮುಂದೊಂದು ಜನ್ಮ ಅಂಥ ಇದ್ದರೆ ಪಾಣರ ಸಮುದಾಯದಲ್ಲಿ ಹುಟ್ಟಿ, ದೈವದ ಚಾಕರಿ ಮಾಡುವ ಅವಕಾಶ ಸಿಗಲಿಯೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಸಮಾಜಮುಖಿ ಫೌಂಡೇಶನ್ ಮಾಡುತ್ತಿದ್ದೇವೆ. ನಲಿಕೆ ಸಮುದಾಯದ ಓದುವ ಮಕ್ಕಳಿಗೆ ಟ್ರಸ್ಟ್ ನಿಂದ ಸಹಾಯ ಮಾಡುತ್ತೇವೆ ಎಂದು ತಿಳಿಸಿದ್ರು.
ಅಮೇರಿಕಾದ ಮ್ಯೂಸಿಯಂನಲ್ಲಿ ಪಂಜುರ್ಲಿಯ ಮೊಗ ಇಟ್ಟಿದ್ದಾರೆ. ಇದು ನಮ್ಮ ನೆಲದ ದೈವ ದೇವರ ಶಕ್ತಿ. ದೈವಾರಾಧನೆಗೆ ಸಾವಿರಾರು ವರ್ಷದ ಇತಿಹಾಸ ಇದೆ. ದೇವಸ್ಥಾನಗಳಿಗೂ ಮುಂಚೆ ಇಲ್ಲಿ ದೈವಾರಾಧಾನೆ ಇತ್ತು. ಪ್ರಕೃತಿಯನ್ನು ಆರಾಧನೆ ಮಾಡುವ ವಿಚಾರಗಳಿದ್ದವು. ದೈವಾರಾಧನೆಗೆ ಸಾವಿರಾರು ವರ್ಷದ ಇತಿಹಾಸ ಇದೆ ಎಂದರೆ, ಅದು ಎಷ್ಟು ಶಕ್ತಿಶಾಲಿ ಎಂಬುವುದನ್ನು ನಾವು ಅರಿತುಕೊಳ್ಳಬೇಕು. ಪಾಣರ ಸಮಾಜದವರು ದೈವ ನರ್ತನ ಕಲೆಯಲ್ಲಿ ತುಂಬಾ ಪ್ರವೀಣರು. ಆ ಕಲೆ ಎಲ್ಲರಿಗೂ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಸಮುದಾಯ ಭವನ ನಿರ್ಮಿಸಲು ಯಾವುದೆಲ್ಲ ವ್ಯವಸ್ಥೆ ಆಗಬೇಕೊ ಅದಕ್ಕೆ ಸಹಕಾರ ನೀಡುತ್ತೇನೆ. ಈಗಿನ ಸರಕಾರಕ್ಕೆ ಮನವರಿಕೆ ಮಾಡಿ, ಆ ಕೆಲಸವನ್ನು ನಾವೆಲ್ಲರೂ ಒಟ್ಟಿಗೆ ಸೇರಿ ಮಾಡೋಣ ಎಂದರು.