ಆದಿತ್ಯ ಎಲ್-1 ಮಿಷನ್‌ನ ಹಿಂದಿದ್ದಾರೆ ನಿಗರ್ ಶಾಜಿ ಎಂಬ ಮಹಿಳೆ! ಕೃಷಿಕ ಪರಿವಾರದಿಂದ ಇಸ್ರೋವರೆಗಿನ ಅಮೋಘ ಪಯಣ!!

ಚೆನ್ನೈ: ಆದಿತ್ಯ ಎಲ್-1 ಮಿಷನ್‌ನ ಯಶಸ್ವಿ ಉಡಾವಣೆ ನಂತರ, ತಮಿಳುನಾಡಿನ ದಕ್ಷಿಣ ಜಿಲ್ಲೆಯ ತೆಂಕಾಶಿಯ ಪ್ರತಿಷ್ಠಿತ ಮಹಿಳಾ ವಿಜ್ಞಾನಿ ನಿಗರ್ ಶಾಜಿ ಹೆಸರು ಮುನ್ನೆಲೆಗೆ ಬಂದಿದೆ. ಸೂರ್ಯನನ್ನು ಅಧ್ಯಯನ ಮಾಡಲು ಭಾರತವು ಪ್ರಾರಂಭಿಸಿದ ಮೊದಲ ಬಾಹ್ಯಾಕಾಶ ಆಧಾರಿತ ಯೋಜನೆಯ ನಿರ್ದೇಶಕಿಯಾಗಿದ್ದಾರೆ ನಿಗರ್ ಶಾಜಿ. ತಮಿಳುನಾಡಿನ ಗ್ರಾಮಾಂತರ ಪ್ರದೇಶವಾದ ಸೆಂಗೊಟ್ಟೈ ಮೂಲದ ನಿಗರ್ ಶಾಜಿ ಮಧುರೈ ಕಾಮರಾಜ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. 1987 ರಲ್ಲಿ ಇಸ್ರೋ ಜೊತೆ ಕೆಲಸ ಮಾಡಲು ಪ್ರಾರಂಭಿಸಿದ ಇವರು ಈಗ ಬೆಂಗಳೂರನ್ನು ತಮ್ಮ ಮನೆಯಾಗಿಸಿಕೊಂಡಿದ್ದಾರೆ.

ಮೊದಲ ಸೌರ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಮೊದಲು, ಶಾಜಿಯನ್ನು ಬೆಂಗಳೂರಿನ ಯುಆರ್ ರಾವ್ ಉಪಗ್ರಹ ಕೇಂದ್ರಕ್ಕೆ ವರ್ಗಾಯಿಸಲಾಯಿತು. ಅಲ್ಲಿ ಅವರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದರು. ಭಾರತದ ಸಂವಹನ, ಅಂತರಗ್ರಹ ಮತ್ತು ದೂರಸಂವೇದಿ ಉಪಗ್ರಹಗಳ ವಿನ್ಯಾಸದಲ್ಲಿ ಅವರು ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದಿತ್ಯ-L1 ಮಿಷನ್‌ನಲ್ಲಿ ತೊಡಗಿಸಿಕೊಳ್ಳುವ ಮೊದಲು ನಿಗರ್ ಶಾಜಿ ಭಾರತೀಯ ಸಂವಹನ, ದೂರಸಂವೇದಿ ಮತ್ತು ಅಂತರಗ್ರಹ ಉಪಗ್ರಹಗಳ ವಿನ್ಯಾಸ ಮತ್ತು ನಿರ್ಮಾಣಕ್ಕೆ ಪ್ರಮುಖ ಕೊಡುಗೆಗಳನ್ನು ನೀಡಿದರು.

ಗಮನಾರ್ಹವಾಗಿ, ಅವರು ರಾಷ್ಟ್ರೀಯ ಸಂಪನ್ಮೂಲಗಳನ್ನು ನಿರ್ವಹಿಸುವ ಮತ್ತು ಮೇಲ್ವಿಚಾರಣೆ ಮಾಡುವ ನಿರ್ಣಾಯಕ ಸಾಧನವಾದ ಇಂಡಿಯನ್ ರಿಸೋರ್ಸ್‌ಸ್ಯಾಟ್-2A ಉಪಗ್ರಹಕ್ಕೆ ಸಹಾಯಕ ಯೋಜನಾ ನಿರ್ದೇಶಕರಾಗಿ ಕೆಲಸ ಮಾಡಿದರು. ಬಾಹ್ಯಾಕಾಶ ಇಂಟರ್ನೆಟ್, ಸಿಸ್ಟಮ್ ಎಂಜಿನಿಯರಿಂಗ್ ಮತ್ತು ಪಿಕ್ಚರ್ ಕಂಪ್ರೆಷನ್‌ಗೆ ಸಂಬಂಧಿಸಿದ ತಂತ್ರಜ್ಞಾನಗಳ ಕುರಿತು ಸಂಶೋಧನೆ ನಡೆಸಿದರು.

ನಿಗರ್ ಶಾಜಿ ಇವರ ತಂದೆ ಶೈಖ್ ಮೀರನ್ ಮತ್ತು ತಾಯಿ ಸೈತೂನ್ ಬಿವಿ ಕೃಷಿಕರಾಗಿದ್ದಾರೆ. ಶಾಜಿ ಅವರ ಪತಿ ದುಬೈ ನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು, ಮಗ ಫ್ಲೂಯಿಡ್ ಮೆಕ್ಯಾನಿಸಮ್ ನಲ್ಲಿ ಡಾಕ್ಟರೇಟ್ ಪಡೆದುಕೊಂಡಿದ್ದು ನೆದರ್ ಲ್ಯಾಂಡ್ಸ್ ನಲ್ಲಿ ಉದ್ಯೋಗದಲ್ಲಿದ್ದರೆ, ಮಗಳು ವೈದ್ಯಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.