ತೋಟದ ಕಳೆಕೊಯ್ಯಲು ಮಲ್ಟಿ ಹೆಡ್ ಗ್ರಾಸ್ ಕಟ್ಟರ್ ಎಂಬ ವಿನೂತನ ಯಂತ್ರ: ಹೈಟೆಕ್ ದೋಟಿ ಖ್ಯಾತಿಯ ಬಾಲಸುಬ್ರಹ್ಮಣ್ಯ ಅವರ ಆವಿಷ್ಕಾರ!!

ಕೃಷಿ ಕ್ಷೇತ್ರ ಕೂಲಿ ಕಾರ್ಮಿಕರನ್ನು ಬೇಡುವ ಕ್ಷೇತ್ರ. ಆದರೆ ಕೃಷಿ ಕೆಲಸ ಮಾಡಲು ಕೂಲಿ ಕಾರ್ಮಿಕರ ಅಲಭ್ಯತೆ ಕೃಷಿ ಭೂಮಿ ಹೊಂದಿರುವವರ ಬಹು ದೊಡ್ಡ ತಲೆನೋವು. ಕೃಷಿ ಏನೋ ಮಾಡಬಹುದು ಆದರೆ ಕೂಲಿ ಕಾರ್ಮಿಕರು ಸಿಗುವುದಿಲ್ಲ, ಸಂಬಳ ಕೊಡಲು ತಾಕತ್ತಿಲ್ಲ ಎನ್ನುವವರು ತಾವೇ ಸ್ವತಃ ಯಂತ್ರೋಪಕರಣಗಳ ಸಹಾಯದಿಂದ ಕಾರ್ಮಿಕರ ಸಹಾಯವಿಲ್ಲದೆಯೂ ಕೃಷಿ ಚಟುವಟೆಕೆಗಳನ್ನು ಮಾಡಬಹುದು. ಇವತ್ತು ಮಾರುಕಟ್ಟೆಯಲ್ಲಿ ಹೈಟೆಕ್ ಉಪಕರಣಗಳು ಲಭ್ಯವಿದ್ದು, ಇವನ್ನು ಉಪಯೋಗಿಸುವುದನ್ನು ಕಲಿತಲ್ಲಿ ಭೂ ಮಾಲೀಕರೇ ನಿರಾಯಾಸವಾಗಿ ಕೃಷಿ ಚಟುವಟಿಕೆಗಳನ್ನು ಮಾಡಬಹುದು.

ಕೃಷಿ ಕ್ಷೇತ್ರದಲ್ಲಿ ಕೃಷಿಕರಿಗೆ ಬೇಕಾದ ಯಂತ್ರಗಳನ್ನು ತಯಾರಿಸುವುದರಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಾಲಸುಬ್ರಹ್ಮಣ್ಯ ಎಚ್.ಎಮ್ ಅವರದ್ದು ಎತ್ತಿದ ಕೈ. ಇವರು ಈಗಾಗಲೇ ಹೈಟೆಕ್ ದೋಟಿ, ಹೈಟೆಕ್ ಔಷಧಿ ಸಿಂಪಡಣೆಯ ಯಂತ್ರಗಳನ್ನು ಆವಿಷ್ಕಾರ ಮಾಡಿದ್ದಾರೆ. ಇದರ ಜೊತೆಗೆ ಅವರ ಇತ್ತೀಚಿನ ಆವಿಷ್ಕಾರ ಮಲ್ಟಿ ಹೆಡ್ ಗ್ರಾಸ್ ಕಟ್ಟರ್‌ ಗಳು.

ಹೈಟೆಕ್ ದೋಟಿ ಆವಿಷ್ಕಾರ

ಕೃಷಿಕ ಕುಟುಂಬದ ಹಿನ್ನಲೆಯ ಬಾಲಸುಬ್ರಹ್ಮಣ್ಯ, ಅಮೇರಿಕಾದಲ್ಲಿ ಕಾರ್ ಡಿಸೈನರ್ ಆಗಿ 13 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕಾರಣಾಂತರಗಳಿಂದ ಹುಟ್ಟೂರಿಗೆ ಬಂದ ಇವರು ಅಡಿಕೆ ಹಾಗೂ ತೆಂಗಿನ ತೋಟದ ಬೆಳೆಗಾರರು ಕೂಲಿಯಾಳುಗಳ ಸಮಸ್ಯೆಯಿಂದ ಬಳಲುವುದನ್ನು ಕಂಡಿದ್ದಾರೆ. ಇದಕ್ಕಾಗಿಯೇ ಹಗುರವಾದ 10 ರಿಂದ 80 ಅಡಿ ಎತ್ತರದವರೆಗೂ ಲೀಲಾಜಾಲವಾಗಿ ಕಾರ್ಯನಿರ್ವಹಿಸಬಲ್ಲ ಹೈಟೆಕ್ ದೋಟಿಯನ್ನು ಆವಿಷ್ಕಾರ ಮಾಡಿದ್ದಾರೆ.

 

ಇವರ 10,000 ಕ್ಕೂ ಹೆಚ್ಚು ದೋಟಿಗಳು ದೇಶ ವಿದೇಶಗಳಲ್ಲಿ ಮಾರಾಟ ಕಂಡಿವೆ. ಹೈಟೆಕ್ ದೋಟಿ ಬಳಕೆಯಿಂದ ಬಹುತೇಕ ಕೃಷಿಕರಿಗೆ ಕೂಲಿಯಾಳುಗಳ ಸಮಸ್ಯೆ ನೀಗಿದೆ. ಸಮಯದ ಸದುಪಯೋಗವಾಗಿದೆ.
ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಾಗ ಆಗಬಹುದಾದ ಸಾವು-ನೋವು-ಅನಾಹುತಗಳು ತಪ್ಪಿವೆ. ಸುಮಾರು 30ಸಾವಿರ ರೂ. ಬೆಲೆಯಿಂದ ಆರಂಭವಾಗುವ ಕಾರ್ಬನ್ ಹೈಟೆಕ್ ದೋಟಿಗಳು ಹಲವರಿಗೆ ಸ್ವ-ಉದ್ಯೋಗವನ್ನು ಕಲ್ಪಿಸಿವೆ ಎನ್ನುವುದು ಸಂತೋಷದ ವಿಚಾರ.

ಮಲ್ಟಿ ಹೆಡ್ ಗ್ರಾಸ್ ಕಟ್ಟರ್ ಎಂಬ ವಿನೂತನ ಆವಿಷ್ಕಾರ

ಬಾಲಸುಬ್ರಹ್ಮಣ್ಯ ಅವರ ಹೊಸತನದ ಹುಡುಕಾಟ ಇಷ್ಟಕ್ಕೇ ನಿಲ್ಲದೆ ಮುಂದುವರಿಯುತ್ತಲೇ ಇದೆ. ಸದಾ ಯಾವುದಾದರೂ ಹೊಸ ಆವಿಷ್ಕಾರ ಮಾಡಬೇಕೆಂಬ ಯೋಚನೆಯಲ್ಲಿಯೇ ಇದ್ದ ಇವರ ಕಣ್ಣಿಗೆ ಕಾಣಿಸಿದ್ದು ಕಳೆಕೊಚ್ಚುವ ಯಂತ್ರ.

ಹೈಟೆಕ್ ದೋಟಿಯ ಯಶಸ್ಸಿನ ನಂತರ ರೈತರಿಗೆ ಉಪಯುಕ್ತವಾದ ಕೃಷಿ ಯಂತ್ರೋಪಕರಣಗಳನ್ನು ಆವಿಷ್ಕಾರ ಮಾಡಬೇಕೆಂಬ ಇವರ ಹಂಬಲ ಹೆಚ್ಚಾಯಿತು. ಇತ್ತೀಚಿಗಿನ ದಿನಗಳಲ್ಲಿ ತೋಟದ ಕಳೆ ಕೀಳುವುದಕ್ಕೆ ಮಾನವ ಶ್ರಮದ ಬದಲು ಕಳೆಕೊಚ್ಚುವ ಯಂತ್ರಗಳನ್ನು ರೈತರು ನೆಚ್ಚಿಕೊಂಡಿರುವುದನ್ನು ಗಮನಿಸಿದ್ದರು. ಬಹಳಷ್ಟು ದೇಶೀಯ ಹಾಗೂ ವಿದೇಶೀಯ ಯಂತ್ರಗಳು ಮಾರುಕಟ್ಟೆಯಲ್ಲಿದ್ದರೂ ಅವುಗಳೆಲ್ಲವೂ ಒಂದೇ (ಬುರುಡೆ/ತಿರುಗಣೆ)ಬ್ರಶ್ ಹೊಂದಿದವು. ಇದರ ಕಾರ್ಯಕ್ಷಮತೆಯನ್ನು ಎರಡು ಪಟ್ಟು ಅಥವಾ ಮೂರು ಪಟ್ಟು ಹೆಚ್ಚಿಸಲು ಸಾಧ್ಯವೇ ಎಂದು ಯೋಚಿಸಿ ಕಾರ್ಯರೂಪಕ್ಕಿಳಿದಾಗ ಜನ್ಮ ತಾಳಿದ್ದೇ ಮಲ್ಟಿ ಹೆಡ್ ಗ್ರಾಸ್ ಕಟ್ಟರ್.

ಒಂದೇ ಬ್ರಶ್ ಇರುವ ಕಳೆ ಕಟಾವು ಯಂತ್ರವನ್ನು ಪರಿವರ್ತಿಸಿ ಎರಡು ಹಾಗೂ ಮೂರು ಪಟ್ಟು ಹೆಚ್ಚು ಕೆಲಸಗಳನ್ನು ಮಾಡಿಸುವ ಹೊಸ ತಂತ್ರಜ್ಞಾನವನ್ನು ಅಳವಡಿಸಿ ತನ್ನ ಹಾಗೂ ರೈತರ ತೋಟದಲ್ಲಿ ಪ್ರಯೋಗ ಮಾಡಿದರು. ಹೆಗಲ ಮೇಲೆ ಹಾಕಿಕೊಳ್ಳುವ ಯಂತ್ರವು ಏಕಕಾಲಕ್ಕೆ ಎರಡು ಪಟ್ಟು ಕಳೆ ಕಟಾವು ಮಾಡಿದರೆ, ಗಾಡಿಯಲ್ಲಿ ಅಳವಡಿಕೆಯ ಯಂತ್ರವು ಮೂರು ಪಟ್ಟು ಕಳೆ ಕತ್ತರಿಸಬಲ್ಲದು. ಈ ಹೊಸತನದ ತಂತ್ರಜ್ಞಾನಕ್ಕೆ ಇವರು ಪೇಟೆಂಟ್ ಪಡೆದುಕೊಂಡಿದ್ದಾರೆ. ಬಹಳಷ್ಟು ರೈತರು ಈಗಾಗಲೇ ಈ ತಂತ್ರಜ್ಞಾನದ ಪ್ರಯೋಜನ ಪಡೆದುಕೊಂಡಿದ್ದಾರೆ.

ಕೃಷಿಕರ ಸವಾಲುಗಳನ್ನು ಅರಿತು ರೈತರ ಶ್ರಮ, ಸಮಯ, ಆದಾಯ ಉಳಿತಾವನ್ನು ದೃಷ್ಟಿಯಲ್ಲಿರಿಸಿಕೊಂಡು ಆವಿಷ್ಕಾರವನ್ನು ಮಾಡಿ ರೈತರಿಗೆ ನೀಡುತ್ತಿದ್ದೇನೆ. ರೈತರು ವಿಶ್ವಾಸದಿಂದ ಸ್ವೀಕರಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಖುಷಿ ತಂದಿದೆ ಎಂದು ಬಾಲಸುಬ್ರಹ್ಮಣ್ಯ ಹೇಳುತ್ತಾರೆ.

ಮಲ್ಟಿ ಹೆಡ್ ಗ್ರಾಸ್ ಕಟ್ಟರ್ ನ ಉಪಯೋಗಗಳು

ಸಾಮಾನ್ಯವಾಗಿ ಹೆಗಲ ಮೇಲೆ ಹಾಕಿಕೊಳ್ಳುವ ಕಳೆಕಟಾವು ಯಂತ್ರದಲ್ಲಿ ಒಂದೇ ಬ್ರಶ್ ಕಟ್ಟರ್ ಇದ್ದರೆ ಇದರಲ್ಲಿ ಎರಡು ಬ್ರಶ್ ಕಟ್ಟರ್ ಬಳಕೆ ಮಾಡಲಾಗಿದೆ. ಗಾಡಿಯಲ್ಲಿ ಕೊಂಡೊಯ್ಯುವ ಯಂತ್ರಕ್ಕೆ ಮೂರು ಬ್ರಶ್ ಕಟ್ಟರ್‌ಗಳು ಇವೆ. 3 ದಿನದ ಕೆಲಸ ಒಂದೇ ದಿನದಲ್ಲಿ ಮುಗಿಸಬಹುದಾಗಿದೆ. ಕೂಲಿಯಲ್ಲಿ ಸುಮಾರು 2000 ರೂ. ವರೆಗೆ ಉಳಿತಾಯ ಮಾಡಬಹುದು. ಹಗುರವಾದ ಯಂತ್ರಗಳು ಕಾರ್ಯನಿರ್ವಹಣೆ ಗೆ ಸುಲಭವಾಗಿದ್ದು ಇಂಧನ ಉಳಿತಾಯವಾಗುತ್ತದೆ. ಮಕ್ಕಳು ಅಥವಾ ಮಹಿಳೆಯರಿಂದ ಹಿಡಿದು ಯಾರು ಬೇಕಾದರೂ ಆರಾಮಾಗಿ ಯಂತ್ರವನ್ನು ಉಪಯೋಗಿಸಬಹುದು. ಕಟಾವು ಯಂತ್ರದ ತೂಕ 14 ರಿಂದ15 ಕೆಜಿಯಷ್ಟೇ ಆಗಿರುವುದರಿಂದ ಸಮತಟ್ಟಾದ ತೋಟಗಳಲ್ಲದೆ ಗುಡ್ಡ ಬೆಟ್ಟ, ಇಳಿಜಾರು ಪ್ರದೇಶಗಳಲ್ಲಿಯೂ ಸುಲಭವಾಗಿ ಕೊಂಡೊಯ್ಯಬಹುದು . ಅಡಿಕೆ, ತೆಂಗು, ರಬ್ಬರ್, ಕಾಫಿ, ಬಾಳೆ, ಗೇರು, ಮಾವು, ದಾಳಿಂಬೆ ಮೊದಲಾದ ತೋಟಗಳಲ್ಲಿ ಸಲೀಸಾಗಿ ಕಳೆ ನಿರ್ವಹಣೆ ಮಾಡಬಹುದು. ಹೆಗಲಿಗೆ ಹಾಕಿಕೊಳ್ಳುವ ಎರಡು ಬ್ರಶ್ ಕಟ್ಟರ್‌ ಉಳ್ಳ ಯಂತ್ರಕ್ಕೆ 35 ಸಾವಿರ ರೂಬೆಲೆ ಇದೆ. ಆದರೆ 10 ಸಾವಿರ ರೂ. ನ ಸಹಾಯ ಧನವಿರುವುದರಿಂದ 25 ಸಾವಿರ ರೂಗೆ ಲಭ್ಯವಾಗಿದೆ. ಮೂರು ಬ್ರಶ್‌ ನ ಗಾಡಿ ಅಳವಡಿಕೆ ಕಟಾವು ಯಂತ್ರಕ್ಕೆ 40 ಸಾವಿರ ರೂಪಾಯಿ. 10 ಸಾವಿರ ರೂ ಸಹಾಯಧನವಿರುವುದರಿಂದ 30 ಸಾವಿರ ರೂಪಾಯಿಗೆ ಲಭ್ಯ.

ಹೆಚ್ಚಿನ ಮಾಹಿತಿಗೆ ಮೊ: 9606142520, 7259350487 ಸಂಪರ್ಕಿಸಬಹುದು