ಬೆಳ್ತಂಗಡಿ: ತಾಲೂಕಿನ ಪುದುವೆಟ್ಟು ಗ್ರಾಮದ ಉದಯೋನ್ಮುಖ ಕಬ್ಬಡ್ಡಿ ಆಟಗಾರ ಸ್ವರಾಜ್ ಆ. 31 ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿತ್ತು. ವರದಿಗಳ ಪ್ರಕಾರ ಲೋನ್ ಆ್ಯಪ್ ಗಳ ಬೆದರಿಕೆಯಿಂದಾಗಿ ಸ್ವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮೃತ ಸ್ವರಾಜ್ ಹಲವು ಆನ್ಲೈನ್ ಲೋನ್ ಆ್ಯಪ್ ಗಳಿಂದ ಸಾಲ ಪಡೆದಿದ್ದ. ಹಣವನ್ನು ಕಂಪನಿಗೆ ಕಂತುಗಳಲ್ಲಿ ಮರು ಪಾವತಿ ಕೂಡ ಮಾಡುತ್ತಿದ್ದ. ಆದರೂ ಬಡ್ಡಿ ಹಾಕಿ ಹೆಚ್ಚುವರಿ ಹಣ ಪಾವತಿ ಮಾಡಲು ಸ್ವರಾಜ್ ಗೆ ಬೆದರಿಕೆ ಕರೆಗಳು ಬರುತ್ತಿದ್ದವು ಎನ್ನಲಾಗಿದೆ.
ಸ್ವರಾಜ್ ತನ್ನ ವಾಟ್ಸಪ್ ನಲ್ಲಿ ತನ್ನ ಅಕ್ಕನ ಮಗಳ ಡಿಪಿ ಹಾಕಿದ್ದು, ಅದರ ಫೋಟೋವನ್ನು ಡೌನ್ಲೋಡ್ ಮಾಡಿ ಸಾಲದಾತ ಕಂಪನಿ ಮಗುವಿನ ಫೋಟೋವನ್ನು ‘ಬೇಬಿ ಫಾರ್ ಸೇಲ್ ‘ ಎಂದು ಬರೆದು ವಿದೇಶಿ ನಂಬರ್ ಗಳ ಮೂಲಕ ಸ್ವರಾಜ್ ಸ್ನೇಹಿತರಿಗೆ ಶೇರ್ ಮಾಡಿದ್ದರು. ಈ ವಿಚಾರ ಸ್ನೇಹಿತರ ಮೂಲಕ ಸ್ವರಾಜ್ ಗೆ ತಿಳಿದಾಗ ಸಾಲದ ಹೊರೆಯಿಂದ ಬಿಡಿಸಿಕೊಳ್ಳಲು ಸಾವಿಗಿಂತ ಒಂದು ದಿನ ಮೊದಲು ಬ್ಯಾಂಕ್ ಖಾತೆಯಿಂದ 30,000 ರೂಪಾಯಿಗಳನ್ನು ಕಂಪನಿಗೆ ಕಟ್ಟಿದ್ದ. ಅದರಿಂದಲೂ ಸಮಾಧಾನವಾಗದ ಕಂಪನಿ ಹೆಚ್ಚುವರಿ ದುಡ್ಡು ಕಟ್ಟಲು ಮತ್ತೆ ಒತ್ತಾಯಿಸಿದೆ. ಅಲ್ಲದೆ ಆಗಸ್ಟ್ 31 ಮಧ್ಯಾಹ್ನ 2 ಗಂಟೆಯ ಒಳಗೆ ಬಡ್ಡಿ ಕಟ್ಟಲು ತಾಕೀತು ಮಾಡಿದೆ.
ತನ್ನಲ್ಲಿ ಅಷ್ಟೊಂದು ದುಡ್ಡಿಲ್ಲದ ಕಾರಣ ಮಾನಸಿಕ ಒತ್ತಡಕ್ಕೆ ಒಳಗಾದ 24 ವರ್ಷದ ಸ್ವರಾಜ್ ಸೀದಾ ತನ್ನ ಪುದುಬೆಟ್ಟು ಗ್ರಾಮದ ಹಳೆಮನೆಗೆ ಹೋಗಿದ್ದಾನೆ. ಅಲ್ಲಿ ಬಚ್ಚಲು ಮನೆಯೊಳಗೆ ಆತ ನೇಣು ಹಾಕಿಕೊಂಡಿದ್ದಾನೆ ಎನ್ನಲಾಗಿದೆ.
ಇದೀಗ ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಸ್ವರಾಜ್ ಮೊಬೈಲ್ ಫೋನ್ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.