ಕಿನ್ನಿಗೋಳಿ: ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಟ್ರಸ್ಟಿ ಹಕ್ಕು ಕೊಡೆತ್ತೂರುಗುತ್ತು ಕುಟುಂಬದ ಹಿರಿಯ ಸದಸ್ಯರಿಗೆ ಸೇರಿದ್ದು ಎಂದು ಮಂಗಳೂರಿನ ಪ್ರಧಾನ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ ಎಂದು ಕೊಡೆತ್ತೂರುಗುತ್ತು ಅರುಣ್ ಕುಮಾರ್ ಶೆಟ್ಟಿ ಮಾಹಿತಿ ನೀಡಿದರು.
ಅವರು ಗುರುವಾರದಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಗೋಷ್ಠಿಯಲ್ಲಿ ಮಾತನಾಡಿದರು.
ಪುತ್ತಿಗೆ ಗುತ್ತಿನ ಸನತ್ ಕುಮಾರ್ ಶೆಟ್ಟಿ ತಾನು ಕೊಡೆತ್ತೂರುಗುತ್ತಿಗೆ ಸಂಬಂಧಿಸಿದವರು ಎಂದು ಹೇಳಿ ಕಟೀಲು ದೇವಳದ ಟ್ರಸ್ಟಿಯಾಗಲು ಪ್ರಯತ್ನಿಸಿ ಕೊಡೆತ್ತೂರುಗುತ್ತಿಗೆ ಸಲ್ಲಬೇಕಾದ ಹಲವಾರು ಗೌರವ ಮರ್ಯಾದೆ ಮನ್ನಣೆಗಳನ್ನು ತಮ್ಮ ಸುಪರ್ದಿಗೆ ಪಡೆಯಲು ಯತ್ನಿಸಿದ್ದರು. ಇದನ್ನು ಪ್ರಶ್ನಿಸಿ ಕೊಡೆತ್ತೂರುಗುತ್ತಿನವರು ನ್ಯಾಯಾಲಯದ ಮೊರೆ ಹೋಗಿದ್ದೆವು. ಇದೀಗ ಕೋರ್ಟ್ ತೀರ್ಪು ನೀಡಿದ್ದು ಕೊಡತ್ತೂರುಗುತ್ತಿನವರಿಗೆ ಆನುವಂಶಿಕ ಆಡಳಿತ ಟ್ರಸ್ಟಿಯ ಅಧಿಕಾರ ಎಂದು ಹೇಳಿದೆ. ಸನತ್ ಕುಮಾರ್ ಶೆಟ್ಟಿ ಅವರು ಪುತ್ತಿಗೆಗುತ್ತಿನವರು ಎಂದು ಘೋಷಿಸಿದ್ದು ಅವರು ಟ್ರಸ್ಟಿಯಾಗಲು ಅರ್ಹರಲ್ಲ ಮತ್ತು ಸನತ್ ಕುಮಾರ್ ದೇಗುಲದ ಟ್ರಸ್ಟಿಯಾಗಿ ಮುಂದುವರಿಯಬಾರದೆಂದು ಕೋರ್ಟ್ ಆದೇಶಿಸಿದೆ ಎಂದು ಅವರು ಹೇಳಿದರು.
ಕೊಡೆತ್ತೂರು ಗುತ್ತಿನ ಹರಿಶ್ಚಂದ್ರ ಆಳ್ವ, ಬಿ.ಆರ್.ಪ್ರಸಾದ್, ನಿತಿನ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.