ಅಜೆಕಾರು ನಾಡಕಚೇರಿಗೆ ಲೋಕಾಯುಕ್ತ ದಾಳಿ: ಲಂಚ ಸ್ವೀಕರಿಸುವಾಗಲೇ ಲೋಕಾ ಪೊಲೀಸ್ ಬಲೆಗೆ!

ಕಾರ್ಕಳ: ಸರ್ಕಾರಿ ಕೆಲಸಕ್ಕಾಗಿ ನೌಕರನೊಬ್ಬ ವ್ಯಕ್ತಿಯೊಬ್ಬರ ಬಳಿ ಲಂಚ ಬೇಡಿಕೆಯಿಟ್ಟ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಅಜೆಕಾರು ನಾಡಕಚೇರಿಯ ಪ್ರಥಮ ದರ್ಜೆ ಸಹಾಯಕ ನಿಜಾಮುದ್ದೀನ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಹಿರ್ಗಾನ ಗ್ರಾಮದ ವ್ಯಕ್ತಿಯೊಬ್ಬರು‌ ಸಂತತಿ ನಕ್ಷೆಗಾಗಿ ಅರ್ಜಿ ಸಲ್ಲಿಸಿದ್ದರು, ಈ ಅರ್ಜಿ ವಿಲೇವಾರಿಗೆ ನಿಜಾಮುದ್ಧಿನ್ ಅವರು 5 ಸಾವಿರ ರೂಪಾಯಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಅವರ ಬೇಡಿಕೆಯಂತೆ 4 ಸಾವಿರ ರೂಪಾಯಿ ಎರಡು ದಿನಗಳ ಹಿಂದಷ್ಟೇ ನೀಡಿದ್ದರು ಎನ್ನಲಾಗಿದ್ದು ಈ ವಿಚಾರವನ್ನು ಲೋಕಾಯುಕ್ತ ಪೊಲೀಸರಿಗೆ ತಿಳಿಸಿದ್ದರು. ಉಳಿದ 1 ಸಾವಿರವನ್ನು ಗುರುವಾರ ನಿಜಾಮುದ್ಧಿನ್ ಅವರಿಗೆ ನೀಡುವಾಗಲೇ ಲೋಕಾಯುಕ್ತ ಪೊಲೀಸರು ದಾಳಿ‌ ನಡೆಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ಈಗಾಗಲೇ ಪೊಲೀಸರು ನಿಜಾಮುದ್ಧೀನ್ ಅವರನ್ನು ಕಚೇರಿಯಲ್ಲಿ ಕುಳ್ಳಿರಿಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ15 ವರ್ಷಗಳಿಂದ ಪ್ರಥಮ ದರ್ಜೆ ಸಹಾಯಕಕಾರಿ ನಿಜಾಮುದ್ಧೀನ್ ಅಜೆಕಾರು ನಾಡ ಕಚೇರಿಯಲ್ಲೇ ಠಿಕಾಣಿ ಹೂಡಿದ್ದು, ಮುಂಭಡ್ತಿ(ಪ್ರಮೋಶನ್ ) ಬಂದಿದ್ದರೂ ಅದನ್ನು ನಿರಾಕರಿಸಿ ಪ್ರಥಮ ದರ್ಜೆ ಸಹಾಯಕರಾಗಿಯೇ ಮುಂದುವರಿದಿದ್ದರು.

ಲೋಕಾಯುಕ್ತ ಎಸ್ ಪಿ ಸೈಮನ್ ಅವರ ನಿರ್ದೇಶನದ ಮೇರೆಗೆ ಉಡುಪಿ ಲೋಕಾಯುಕ್ತ ಡಿವೈಎಸ್ಪಿ ಪ್ರಕಾಶ್ ಕೆ ಸಿ, ಉಡುಪಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ರಫೀಕ್ ಎಂ, ಸಿಬ್ಬಂದಿಯವರಾದ ನಾಗೇಶ್ ಉಡುಪ ನಾಗರಾಜ,ರಾಘವೇಂದ್ರ ಮಲ್ಲಿಕಾ, ಸತೀಶ ಹಂದಾಡಿ ಅಬ್ದುಲ್ ಜಲಾಲ್, ರಮೇಶ್, ರವೀಂದ್ರ ಸೂರಜ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.