ಇಂದಿನಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಆರಂಭ

ಶಿವಮೊಗ್ಗ: ಮಲೆನಾಡಿಗರ ಬಹುದಿನದ ಕನಸು ಇಂದು ನನಸಾಗುತ್ತಿದೆ. ಇಂದಿನಿಂದ ಶಿವಮೊಗ್ಗದಲ್ಲಿ ಲೋಹದ ಹಕ್ಕಿಗಳ ಹಾರಾಟ ಪ್ರಾರಂಭವಾಗಲಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು ಬೆಳಗ್ಗೆ 9:50ಕ್ಕೆ ಇಂಡಿಗೋ 6E 7731 ವಿಮಾನವು ಕುವೆಂಪು ವಿಮಾನ ನಿಲ್ದಾಣಕ್ಕೆ ಸುಮಾರು 11:05ಕ್ಕೆ ಆಗಮಿಸಲಿದೆ. ಈ ಮೂಲಕ ನಾಗರಿಕ ವಿಮಾನ ಹಾರಾಟ ಪ್ರಥಮವಾಗಿ ಪ್ರಾರಂಭವಾಗಲಿದೆ. ಇಂಡಿಗೋ ವಿಮಾನ 6E 77312 ವಿಮಾನವು ಕುವೆಂಪು ವಿಮಾನ ನಿಲ್ದಾಣದಿಂದ 11:25 ಕ್ಕೆ ಹೊರಟು 12:25 ಕ್ಕೆ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಲಿದೆ.ಇಂದು (ಗುರುವಾರ) ಬೆಳಗ್ಗೆ ಬೆಂಗಳೂರಿನಿಂದ ಇಂಡಿಗೋ ವಿಮಾನ ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.ಇಂದಿನಿಂದ ನೂತನ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ RQY ಎಂದು ಅಂತಾರಾಷ್ಟ್ರೀಯ ಕೋಡ್ ಲಭ್ಯವಾಗಿದೆ: ಪ್ರತಿಯೊಂದು ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯವಾಗಿ ಗುರುತಿಸಲು ಒಂದೊಂದು ಕೋಡ್ ನೀಡಲಾಗುತ್ತದೆ. ಅದರಂತೆ ಶಿವಮೊಗ್ಗದ ಏಪೋರ್ಟ್​ಗೆ RQY ಎಂಬ ಕೋಡ್ ನೀಡಲಾಗಿದೆ. ವಿಮಾನದ ಟಿಕೆಟ್​ ಬುಕ್ಕಿಂಗ್​ ವೇಳೆ ಇದು ಅತಿ ಮುಖ್ಯವಾಗಿರುತ್ತದೆ.

ಪ್ರಧಾನಿ ನರೇಂದ್ರ ಮೋದಿಯವರಿಂದಾಗಿತ್ತು ಉದ್ಘಾಟನೆ: 2023 ಫೆಬ್ರವರಿ 27 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೋಯಿಂಗ್ ವಿಮಾನದಲ್ಲಿ ಆಗಮಿಸಿ ಶಿವಮೊಗ್ಗದ ವಿಮಾನ ನಿಲ್ದಾಣವನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿದ್ದರು. ನಂತರದಲ್ಲಿ ಪ್ರಧಾನ ಮಂತ್ರಿ ಚುನಾವಣಾ ಪ್ರಚಾರಕ್ಕಾಗಿ ಇದೇ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿರವರು ಸಹ ಈ ವಿಮಾನ‌ ನಿಲ್ದಾಣಕ್ಕೆ ತಮ್ಮ ಖಾಸಗಿ ವಿಮಾನದಲ್ಲಿ ಆಗಮಿಸಿದ್ದರು.

ಬೆಂಗಳೂರು-ಶಿವಮೊಗ್ಗ ವಿಮಾನ ಮಾರ್ಗಕ್ಕೆ ಡಿಮ್ಯಾಂಡ್: ಶಿವಮೊಗ್ಗ- ಬೆಂಗಳೂರು ಮಾರ್ಗದಲ್ಲಿ ವಿಮಾನ ಹಾರಾಟಕ್ಕೆ ಹಾಲಿ ಇಂಡಿಗೋ ವಿಮಾನ ಸಂಸ್ಥೆ ಮುಂದೆ ಬಂದಿದೆ. ಸದ್ಯ ಬೆಂಗಳೂರು-ಶಿವಮೊಗ್ಗ ಮಾರ್ಗಕ್ಕೆ ಮುಂಗಡವಾಗಿ ಒಂದು ತಿಂಗಳು ಫುಲ್ ಬುಕ್ಕಿಂಗ್​ ಆಗಿದೆ. ಶಿವಮೊಗ್ಗದಿಂದ ಗೋವಾ, ತಿರುಪತಿ, ಹೈದರಾಬಾದ್​ ಮಾರ್ಗಕ್ಕೆ ಈಗಾಗಲೇ ಟೆಂಡರ್ ಕರೆಯಾಗಿದ್ದು, ಇದರಲ್ಲಿ ಇಂಡಿಗೋ, ಸ್ಟಾರ್ ಹಾಗೂ ಸ್ಪೇಸ್ ಜೆಟ್ ವಿಮಾನ ಸಂಸ್ಥೆಗಳು ಭಾಗಿಯಾಗಿವೆ.‌ ಈ ಮಾರ್ಗಗಳು ಉಡಾನ್ ನಡಿ ಬರಲಿವೆ. ಸದ್ಯ ಶಿವಮೊಗ್ಗದಿಂದ ಬೆಂಗಳೂರು ಮಾರ್ಗ ಸಂಚಾರವಿದೆ. ಬೆಂಗಳೂರಿನಿಂದ ಮುಂಬೈ, ದೆಹಲಿ,‌ ಕೊಲ್ಕತ್ತ, ಚೆನೈ ಸೇರಿದಂತೆ ಇತರೆ ಕಡೆಗೆ ಸಂಪರ್ಕ ಕಲ್ಪಿಸಲಿದೆ.

779 ಎಕರೆ, 449 ಕೋಟಿ ರೂ. ವೆಚ್ಚದ ರಾಜ್ಯದ ಸುಂದರ ಏಪೋರ್ಟ್ : ಸೋಗಾನೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಜಾಗದಲ್ಲಿ ರೈತರು ಬಗರ್ ಹುಕುಂ ಸಾಗುವಳಿ ನಡೆಸುತ್ತಿದ್ದರು. ಆಗ ಡಿಸಿಎಂ ಆಗಿದ್ದ ಯಡಿಯೂರಪ್ಪನವರು ವಿಮಾನ ನಿಲ್ದಾಣದ ನಿರ್ಮಾಣಕ್ಕೆ‌ ಮುಂದಾದರು. ಆಗ ಅದು ಸಾಧ್ಯವಾಗದೇ ಹೋದಾಗ ಮುಖ್ಯಮಂತ್ರಿಗಳಾದ ಮೇಲೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ವೇಗವನ್ನು‌ ನೀಡಲಾಯಿತು. ಇಲ್ಲಿ ನಿರ್ಮಾಣವಾಗಿರುವ ರನ್​ ವೇ ಅಂತಾರಾಷ್ಟ್ರೀಯ ಮಟ್ಟದ ರನ್ ವೇ ಆಗಿದೆ. ಇಲ್ಲಿ ದೊಡ್ಡ ದೊಡ್ಡ ವಿಮಾನಗಳನ್ನು ಲ್ಯಾಂಡ್ ಮಾಡಬಹುದಾಗಿದೆ. ಇನ್ನು ರಾತ್ರಿ ವೇಳೆ ಸಹ ವಿಮಾನ ಲ್ಯಾಂಡ್​ ಮಾಡುವ ಸೌಲಭ್ಯವನ್ನು ಒದಗಿಸಲಾಗಿದೆ.

ಇಂದು ಸಚಿವರಾದ ಎಂ.ಬಿ.ಪಾಟೀಲ್ ಅವರು ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಮಾನದಲ್ಲಿ ಆಗಮಿಸಲಿದ್ದಾರೆ. ವಿಮಾನವನ್ನು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಸ್ಬಾಗತಿಸಲಿದ್ದಾರೆ. ನಂತರ ವಿಮಾನ ನಿಲ್ದಾಣದಲ್ಲಿ 20 ನಿಮಿಷದ ಕಾರ್ಯಕ್ರಮ ನಡೆಯಲಿದೆ. ಬೆಂಗಳೂರಿನಿಂದ ಬಂದ ಸಚಿವರಾದ ಎಂ.ಬಿ.ಪಾಟೀಲ್​ ಅವರು ಅದೇ ವಿಮಾನದಲ್ಲಿ ವಾಪಸ್ ಆಗಲಿದ್ದಾರೆ.

ಇನ್ನು ಉದ್ಘಾಟನೆಯಾಗಿದ್ದ ನಿಲ್ದಾಣಕ್ಕೆ ಫೈರ್​ ಜೆಟ್ಸ್​ ಅನ್ನು ದುಬೈ‌ನಿಂದ ತರಿಸಿದ್ದು, ಬಾಂಬ್ ಸ್ವಾಡ್​ನ ಲೈಸನ್ಸ್​ನ್ನು ತರುವಲ್ಲಿ ಬಿ.ವೈ​. ರಾಘವೇಂದ್ರ ಅವರ ಪಾತ್ರ‌ ಮಹತ್ವದಾಗಿದೆ.ರಾಜ್ಯ ಸರ್ಕಾರ ನಿರ್ವಹಣೆಯ ಏಕೈಕ ವಿಮಾನ‌ ನಿಲ್ದಾಣ: ಶಿವಮೊಗ್ಗದ ವಿಮಾನ ನಿಲ್ದಾಣವು ರಾಜ್ಯ ಸರ್ಕಾರದ ನಿರ್ವಹಣೆಯಲ್ಲಿ ಇರುವ ಏಕೈಕ ವಿಮಾನ ನಿಲ್ದಾಣವಾಗಿದೆ. ಇದು ಏರ್ ಇಂಡಿಯಾ ಅಥಾರಿಟಿಯ ವ್ಯಾಪ್ತಿಯಲ್ಲಿದ್ದರು, ಹಾಲಿ ಸಂಪೂರ್ಣ ನಿರ್ವಹಣೆ ರಾಜ್ಯ ಸರ್ಕಾರಕ್ಕೆ ಒಳಪಟ್ಟಿದೆ. ಇದರ ನಿರ್ದೆಶಕರನ್ನು ರಾಜ್ಯ ಸರ್ಕಾರ ನೇಮಿಸಿದೆ. ಇದರ ಖರ್ಚು ವೆಚ್ಚವನ್ನು ರಾಜ್ಯ ಸರ್ಕಾರ ನೋಡಿಕೊಳ್ಳುತ್ತಿದೆ.