‘Global IndiaAI’ ಪ್ರಥಮ ಸಮ್ಮೇಳನ ಅಕ್ಟೋಬರ್ ತಿಂಗಳಲ್ಲಿ

ನವದೆಹಲಿ: ಭಾರತ ಮತ್ತು ವಿಶ್ವದಾದ್ಯಂತದ ಪ್ರಮುಖ ಎಐ ಕಂಪನಿಗಳು, ಸಂಶೋಧಕರು, ಸ್ಟಾರ್ಟ್‌ಅಪ್​ಗಳು ಮತ್ತು ಹೂಡಿಕೆದಾರರು ಇದರಲ್ಲಿ ಭಾಗವಹಿಸಲಿದ್ದಾರೆ.ಈ ವರ್ಷದ ಅಕ್ಟೋಬರ್​​ನಲ್ಲಿ ಮೊದಲ ಬಾರಿಗೆ ‘ಗ್ಲೋಬಲ್ ಇಂಡಿಯಾಎಐ 2023′ ಸಮ್ಮೇಳನ ಆಯೋಜಿಸಲಾಗುವುದು ಎಂದು ಐಟಿ ಸಚಿವಾಲಯ ಬುಧವಾರ ತಿಳಿಸಿದೆ. ಇದೇ ವರ್ಷದ ಅಕ್ಟೋಬರ್​ನಲ್ಲಿ ಗ್ಲೋಬಲ್ ಇಂಡಿಯಾಎಐ 2023’ ಸಮ್ಮೇಳನ ಆಯೋಜಿಸಲಾಗುವುದು ಎಂದು ಐಟಿ ಸಚಿವಾಲಯ ಹೇಳಿದೆ.

“ಗ್ಲೋಬಲ್ ಇಂಡಿಯಾಎಐ 2023 ಸಮ್ಮೇಳನದ ಆಯೋಜನೆಗೆ ತಾತ್ಕಾಲಿಕವಾಗಿ ಅಕ್ಟೋಬರ್ 14-15 ರಂದು ದಿನಾಂಕ ನಿಗದಿಪಡಿಸಲಾಗಿದೆ. ಇದು ಭಾರತ ಮತ್ತು ಪ್ರಪಂಚದಾದ್ಯಂತದ ಎಐನಲ್ಲಿನ ಉತ್ಕೃಷ್ಟವಾದ ಎಲ್ಲವನ್ನೂ ಒಂದುಗೂಡಿಸಲಿದೆ.ಸೆಮಿಕಾನ್ ಇಂಡಿಯಾ ಸಮ್ಮೇಳನದ ಭಾರಿ ಯಶಸ್ಸಿನ ನಂತರ, ಗ್ಲೋಬಲ್ ಇಂಡಿಯಾಎಐ ಕಾರ್ಯಕ್ರಮವು ಭಾರತದ ಎಐ ಭವಿಷ್ಯವನ್ನು ಉಜ್ವಲಗೊಳಿಸಲಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಈ ಸಮ್ಮೇಳನವು ಪ್ರತಿವರ್ಷವೂ ನಡೆಯುವ ನಿರೀಕ್ಷೆಯಿದೆ ಮತ್ತು ಜಾಗತಿಕ ಎಐ ಉದ್ಯಮ, ಸ್ಟಾರ್ಟ್‌ಅಪ್​ಗಳು, ವೃತ್ತಿನಿರತರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಲೇಬೇಕಾದ ಕಾರ್ಯಕ್ರಮವಾಗಲಿದೆ” ಎಂದು ಸಚಿವರು ಹೇಳಿದರು.

ಮುಂದಿನ ಪೀಳಿಗೆಯ ಕಲಿಕೆ ಮತ್ತು ಅಡಿಪಾಯ ಎಐ ಮಾದರಿಗಳು, ಆರೋಗ್ಯ ರಕ್ಷಣೆ, ಆಡಳಿತ ಮತ್ತು ಮುಂದಿನ ತಲೆಮಾರಿನ ಎಲೆಕ್ಟ್ರಿಕ್ ವಾಹನಗಳಲ್ಲಿ ಎಐನ ಅಳವಡಿಕೆ, ಭವಿಷ್ಯದ ಎಐ ಸಂಶೋಧನಾ ಪ್ರವೃತ್ತಿಗಳು, ಎಐ ಕಂಪ್ಯೂಟಿಂಗ್ ವ್ಯವಸ್ಥೆಗಳು, ಹೂಡಿಕೆ ಅವಕಾಶಗಳು ಮತ್ತು ಎಐ ಪ್ರತಿಭೆಗಳನ್ನು ಪೋಷಿಸುವುದು ಮುಂತಾದ ವಿಷಯಗಳನ್ನು ಸಮ್ಮೇಳನವು ಒಳಗೊಂಡಿದೆ.

ಯಂತ್ರಗಳು ಸಹ ಮಾನವರಂತೆ ಯೋಚಿಸಬಹುದು ಎಂಬ ಕಲ್ಪನೆಯಿಂದ ಕೃತಕ ಬುದ್ಧಿಮತ್ತೆಯ ಕ್ಷೇತ್ರ ಹುಟ್ಟಿಕೊಂಡಿದೆ. ಇಂದು ಈ ಕ್ಷೇತ್ರದಲ್ಲಿನ ತ್ವರಿತ ಪ್ರಗತಿಯು ಸಂಶೋಧನೆ ಮತ್ತು ಅನ್ವೇಷಣೆಗೆ ಹೊಸ ಮಾರ್ಗಗಳನ್ನು ತೆರೆದಿದೆ. ಆದರೆ ನೈತಿಕ ಮತ್ತು ಸುರಕ್ಷತಾ ಪ್ರಶ್ನೆಗಳನ್ನು ಕೂಡ ಹುಟ್ಟುಹಾಕಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಸೆಮಿಕಾನ್ ಇಂಡಿಯಾ ಸಮ್ಮೇಳನದ ಕಳೆದ ಎರಡು ಆವೃತ್ತಿಗಳ ಯಶಸ್ಸು ಭಾರತವನ್ನು ಜಾಗತಿಕ ಸೆಮಿಕಾನ್ ನಕ್ಷೆಯಲ್ಲಿ ಮುಂಚೂಣಿಗೆ ತಂದಿದೆ. ಇದು ಈ ವಲಯದಲ್ಲಿ ಹೂಡಿಕೆ ಮತ್ತು ಬೆಳವಣಿಗೆಗೆ ವೇಗವರ್ಧಕವಾಗಲು ಭಾರತಕ್ಕೆ ಅನುವು ಮಾಡಿಕೊಟ್ಟಿದೆ. ಗ್ಲೋಬಲ್ ಇಂಡಿಯಾಎಐ ಶೃಂಗಸಭೆಯು ಭಾರತದ ಎಐ ಭವಿಷ್ಯ ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ವೇಗವರ್ಧಿಸುತ್ತದೆ ಎಂದು ಚಂದ್ರಶೇಖರ್ ಹೇಳಿದರು.

ಎಐ ಅಥವಾ ಕೃತಕ ಬುದ್ಧಿಮತ್ತೆ ಎಂಬುದು ತಾರ್ಕಿಕತೆ, ಕಲಿಕೆ, ಯೋಜನೆ ಮತ್ತು ಸೃಜನಶೀಲತೆಯಂತಹ ಮಾನವನಂತಹ ಸಾಮರ್ಥ್ಯಗಳನ್ನು ಪ್ರದರ್ಶಿಸುವ ಯಂತ್ರದ ಸಾಮರ್ಥ್ಯವಾಗಿದೆ. ಕೃತಕ ಬುದ್ಧಿಮತ್ತೆಯ ವೈಜ್ಞಾನಿಕ ಸಂಶೋಧನೆಯು ದೈನಂದಿನ ಜೀವನದಲ್ಲಿನ ಸಂವಹನ, ಸಾರಿಗೆ, ಆರೋಗ್ಯ ರಕ್ಷಣೆ ಮತ್ತು ಇನ್ನು ಹಲವಾರು ಕ್ಷೇತ್ರಗಳಲ್ಲಿ ಅಗಾಧ ಬದಲಾವಣೆ ತರುತ್ತಿದೆ.

ಡಿಐ ಭಾಶಿಣಿ, ಇಂಡಿಯಾ ಡೇಟಾ ಸೆಟ್​​ ಪ್ರೋಗ್ರಾಂ, ಸ್ಟಾರ್ಟ್ ಅಪ್ ಗಳಿಗಾಗಿ ಇಂಡಿಯಾಎಐ ಫ್ಯೂಚರ್ ಡಿಸೈನ್ ಕಾರ್ಯಕ್ರಮ ಮತ್ತು ವಿಶ್ವದರ್ಜೆಯ ಎಐ ಪ್ರತಿಭೆಗಳನ್ನು ಪೋಷಿಸಲು ಮೀಸಲಾಗಿರುವ ಇಂಡಿಯಾಎಐ ಫ್ಯೂಚರ್ ಸ್ಕಿಲ್ಸ್ ಕಾರ್ಯಕ್ರಮದಂತಹ ಸರ್ಕಾರದ ಪ್ರಮುಖ ಉಪಕ್ರಮಗಳಿಗೆ ಈ ಸಮ್ಮೇಳನವು ಪ್ರದರ್ಶನ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ.