ನವದೆಹಲಿ: ಕೇಂದ್ರ ಸರ್ಕಾರವು ಮಂಗಳವಾರ ಗೃಹಬಳಕೆಯ ಅಡುಗೆ ಅನಿಲ (LPG) ದ ಬೆಲೆಯನ್ನು ಪ್ರತಿ ಸಿಲಿಂಡರ್ಗೆ 200 ರೂ. ಇಳಿಕೆ ಮಾಡಿ ಗೃಹಿಣಿಯರಿಗೆ ರಕ್ಷಾಬಂಧನದ ಉಡುಗೊರೆ ನೀಡಿದೆ.
ಬುಧವಾರದಿಂದ ಜಾರಿಗೆ ಬರಲಿರುವ ಈ ನಿರ್ಧಾರವು ದ್ರವೀಕೃತ ಪೆಟ್ರೋಲಿಯಂ ಅನಿಲದ (ಎಲ್ಪಿಜಿ) ಎಲ್ಲಾ 33 ಕೋಟಿ ದೇಶೀಯ ಗ್ರಾಹಕರಿಗೆ ಪ್ರಯೋಜನವಾಗಲಿದೆ. ಉಜ್ವಲ ಯೋಜನೆಯಡಿ ಒಳಪಡುವ ಸುಮಾರು 10 ಕೋಟಿ ಬಡ ಕುಟುಂಬಗಳಿಗೆ, ಪ್ರತಿ ಸಿಲಿಂಡರ್ಗೆ 200 ರೂ.ಗಳ ಸಬ್ಸಿಡಿಗೆ ಹೆಚ್ಚುವರಿಯಾಗಿ ಬೆಲೆ ಕಡಿತಗೊಳಿಸಲಾಗಿದ್ದು, ಇದರ ಪರಿಣಾಮವಾಗಿ ಪ್ರತಿ ಸಿಲಿಂಡರ್ಗೆ 400 ರೂ.ನಷ್ಟು ಇಳಿಕೆಯಾಗಲಿದೆ.
ಪ್ರಸ್ತುತ ಸಿಲಿಂಡರ್ ಬೆಲೆ ರೂ 1,103 ಇದ್ದರೆ ಈ ನಿರ್ಧಾರದ ಬಳಿಕ ಎಲ್ಲಾ ದೇಶೀಯ ಗ್ರಾಹಕರಿಗೆ 903 ರೂ.ನಲ್ಲಿ ಸಿಲಿಂಡರ್ ಲಭ್ಯವಾಗಲಿದೆ.
ಬೆಲೆ ಕಡಿತದ ಹೊರತಾಗಿ ಹೆಚ್ಚುವರಿ 75 ಲಕ್ಷ ಉಜ್ವಲ ಸಂಪರ್ಕಗಳನ್ನು ನೀಡಲು ಸರ್ಕಾರ ನಿರ್ಧರಿಸಿದ್ದು, ಯೋಜನೆಯಡಿ ಒಟ್ಟು ಫಲಾನುಭವಿಗಳ ಸಂಖ್ಯೆಯನ್ನು 10.35 ಕೋಟಿಗೆ ಏರಿಸುವ ಗುರಿಹೊಂದಿದೆ.
ಪ್ರಸ್ತುತ ಆಹಾರವಸ್ತುಗಳ ಬೆಲೆ ಏರಿಕೆಯಿಂದಾಗಿ 7.44 ನಷ್ಟು ಏರಿರುವ ಹಣದುಬ್ಬರವನ್ನು ಕಡಿಮೆ ಮಾಡುವಲ್ಲಿ ಈ ನಿರ್ಧಾರವು ಸಹಾಯಮಾಡಬಹುದು ಎಂದು ಅಂದಾಜಿಸಲಾಗಿದೆ.