ಸ್ಯಾಂಡಲ್ವುಡ್ನ ಖ್ಯಾತ ಹಾಸ್ಯ ನಟ ರಂಗಾಯಣ ರಘು ತಮ್ಮ ಅಭಿನಯದ ಮೂಲಕ ಅಪಾರ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. ಎಂತಹದ್ದೇ ಪಾತ್ರವನ್ನು ಕೊಟ್ಟರೂ ಕೂಡ ಸಲೀಸಾಗಿ ನಟಿಸಿ ಸುಲಭದಲ್ಲೇ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ಇಷ್ಟು ಮಾತ್ರವಲ್ಲದೇ ರಘು ಅವರು ಮೊದಲಿನಿಂದಲೂ ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ, ಖಳನಟನ ಪಾತ್ರಗಳಲ್ಲಿ ಮತ್ತು ಇತ್ತೀಚೆಗೆ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಚಡ್ಡಿದೋಸ್ತಿ’ ಚಿತ್ರದಲ್ಲಿ ನಾಯಕನಾಗಿ ಮಿಂಚಿದ ರಂಗಾಯಣ ರಘು ಇದೀಗ ಮತ್ತೆ ‘ಶಾಖಾಹಾರಿ’ ಮೂಲಕ ಹೀರೋ ಆಗಿ ಮಿಂಚಲು ಸಜ್ಜಾಗಿದ್ದಾರೆ.ರಂಗಾಯಣ ರಘು ನಟನೆಯ ‘ಶಾಖಾಹಾರಿ’ ಚಿತ್ರಕ್ಕೆ ವಿಕಟಕವಿ ಯೋಗರಾಜ್ ಭಟ್ ಸಾಥ್,ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ‘ಶಾಖಾಹಾರಿ’ ಚಿತ್ರಕ್ಕೆ ವಿಕಟಕವಿ ಯೋಗರಾಜ್ ಭಟ್ ಸಾಥ್ ನೀಡಿದ್ದಾರೆ.
‘ಶಾಖಾಹಾರಿ’ ಸಿನಿಮಾದಲ್ಲಿ ರಂಗಾಯಣ ರಘು ಹಿಂದಿನ ಸಿನಿಮಾಗಳಿಗಿಂತ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಒಂದಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ, ಅಸೋಸಿಯೇಟ್ ಡೈರೆಕ್ಟರ್ ಆಗಿ, ಬರಹಗಾರರಾಗಿ ಅನುಭವವಿರುವ ಯುವ ಪ್ರತಿಭೆ ಸಂದೀಪ್ ಸುಂಕದ್ ಈ ಚಿತ್ರಕ್ಕೆ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ವಿಶ್ವಜಿತ್ ರಾವ್ ಅವರ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಮಯೂರ್ ಅಂಬೆಕಲ್ಲು ಸಂಗೀತ ಮತ್ತು ಆಶಿಕ್ ಕುಸುಗೊಳ್ಳಿರವರ ಗ್ರೇಡಿಂಗ್ ಈ ಚಿತ್ರಕ್ಕಿದೆ.
ಸಂಪೂರ್ಣ ಮಲೆನಾಡಿನಲ್ಲೇ ಚಿತ್ರೀಕರಣಗೊಂಡಿರುವ ಈ ಸಿನಿಮಾದಲ್ಲಿ ಅನೇಕ ಮಲೆನಾಡಿಗರು ಕೆಲಸ ಮಾಡಿರೋದು ಮತ್ತೊಂದು ವಿಶೇಷ ಸಂಗತಿ. ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಕೀಳಂಬಿ ಮೀಡಿಯಾ ಲ್ಯಾಬ್ ಮೂಲಕ ರಾಜೇಶ್ ಕೀಳಂಬಿ ಹಾಗೂ ರಂಜಿನಿ ಪ್ರಸನ್ನ ಜೊತೆಗೂಡಿ ಚೊಚ್ಚಲ ಬಾರಿಗೆ ನಿರ್ಮಿಸಿರುವ ‘ಶಾಖಾಹಾರಿ’ ಚಿತ್ರದ ಟೀಸರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.
ರಘು ಅಭಿನಯದ ಸಿನಿಮಾಗಳು: ಕನ್ನಡದ ಹಲವು ಚಿತ್ರಗಳಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಧಮ್, ಕೋತಿಗಳು ಸಾರ್ ಕೋತಿಗಳು, ಸಾಹುಕಾರ, ದುನಿಯಾ, ಗಾಳಿಪಟ, ಅವ್ವ, ರಾಮ್, ಉಲ್ಲಾಸ ಉತ್ಸಾಹ, ಚಿರು, ಸಂಜು ವೆಡ್ಸ್ ಗೀತಾ, ಹುಡುಗರು, ಚಿಂಗಾರಿ, ಅಲೆಮಾರಿ, ಅಣ್ಣಾ ಬಾಂಡ್, ರೋಮಿಯೋ, ಕಡ್ಡಿಪುಡಿ, ಅಗ್ರಜ, ಗಜಕೇಸರಿ, ಪವರ್, ಅಕಿರಾ, ದೊಡ್ಮನೆ ಹುಡ್ಗ, ರಾಜಕುಮಾರ, ಪಂಚತಂತ್ರ, ಭರಾಟೆ, ಯುವರತ್ನ, ಜೇಮ್ಸ್ ಗಾಳಿಪಟ 2 ಸೇರಿದಂತೆ ಸುಮಾರು 250 ಕ್ಕೂ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಅನೇಕ ಸಿನಿಮಾಗಳು ಇವರ ಕೈಯಲ್ಲಿದೆ.
ಸದ್ದಿಲ್ಲದೇ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುವ ‘ಶಾಖಾಹಾರಿ’ ಚಿತ್ರಕ್ಕೆ ಇದೀಗ ವಿಕಟಕವಿ ಯೋಗರಾಜ್ ಭಟ್ ಸಾಥ್ ಸಿಕ್ಕಿದೆ. ಹೌದು, ಈ ಚಿತ್ರದ ಟೈಟಲ್ ಅನ್ನು ಯೋಗರಾಜ್ ಭಟ್ ಬಿಡುಗಡೆಗೊಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ತೀರ್ಥಹಳ್ಳಿಯ ಊರೊಂದರಲ್ಲಿ ನಡೆಯುವ ನಿಗೂಢ ಘಟನೆಯ ಸುತ್ತ ಸಾಗುವ ಕಥೆ ಇದಾಗಿದ್ದು, ಹೋಟೆಲ್ ಭಟ್ಟನಾಗಿ ರಂಗಾಯಣ ರಘು, ಎಸ್.ಐ ಆಗಿ ಗೋಪಾಲ್ ಕೃಷ್ಣ ದೇಶಪಾಂಡೆ ಮತ್ತು ಸುಜಯ್ ಶಾಸ್ತ್ರಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಹರಿಣಿ, ಪ್ರತಿಮಾ ನಾಯಕ್, ವಿನಯ್ ಯು.ಜೆ., ನಿಧಿ ಹೆಗ್ಡೆ, ಶ್ರೀಹರ್ಷ ಗೋಭಟ್ಟ ಮತ್ತಿತರು ತಾರಾಬಳಗದಲ್ಲಿದ್ದಾರೆ.