ಉಡುಪಿ: ನಾಳೆ(ಆ. 30) ಗೃಹಲಕ್ಷ್ಮಿ ಯೋಜನೆಗೆ ಚಾಲನೆ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಉಡುಪಿ ನಗರಸಭೆ ಇವರ ಸಹಯೋಗದಲ್ಲಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತೀ ತಿಂಗಳು 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಸಮಾರಂಭವು ಆಗಸ್ಟ್ 30 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಕಿನ್ನಿಮುಲ್ಕಿ ಮಿಷನ್ ಕಂಪೌಂಡ್‌ನ ಬಾಸೆಲ್ ಮಿಷನರಿಸ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಆರ್. ಹೆಬ್ಬಾಳ್ಕರ್ ಉದ್ಘಾಟಿಸಲಿದ್ದು, ಶಾಸಕ ಯಶ್‌ಪಾಲ್ ಎ ಸುವರ್ಣ ಅಧ್ಯಕ್ಷತೆ
ವಹಿಸಲಿದ್ದಾರೆ.

ಯೋಜನೆಯ ಚಾಲನಾ ಕಾರ್ಯಕ್ರಮದ ನೇರ ಪ್ರಸಾರ

ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಈ ಕೆಳಕಂಡ ಸ್ಥಳಗಳಲ್ಲಿ ಆಗಸ್ಟ್ 30 ರಂದು ಬೆಳಗ್ಗೆ 11.30 ಕ್ಕೆ ಗೃಹಲಕ್ಷ್ಮೀ ಯೋಜನೆಯ ಚಾಲನಾ ಕಾರ್ಯಕ್ರಮದ ನೇರ ಪ್ರಸಾರವು ನಡೆಯಲಿದೆ. ಪಡುಕೆರೆ, ವಿಷ್ಣುಮೂರ್ತಿ, ಗೆಂಡೆಕೆರೆ ಮತ್ತು ತೋಡ್ಕಟ್ಟು ವಾರ್ಡ್ನವರಿಗೆ ಪಾರಂಪಳ್ಳಿ ಗ್ರಾಮದ ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ, ಕಾರ್ತಟ್ಟು, ಮಾರಿಗುಡಿ ಮತ್ತು ಪೇಟೆ ವಾರ್ಡ್ನವರಿಗೆ ಚಿತ್ರಪಾಡಿ ಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನದ ಮುಂಭಾಗದಲ್ಲಿ, ಬಡಾಹೋಳಿ, ಮೂಡೋಳಿ, ತೆಂಕುಹೋಳಿ ಮತ್ತು ಪಡುಹೋಳಿ ವಾರ್ಡ್ನವರಿಗೆ ಕಾರ್ಕಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ ಹಾಗೂ ಭಗವತಿ, ಪಾತಾಳಬೆಟ್ಟು, ದೊಡ್ಮನೆಬೆಟ್ಟು, ಚೆಲ್ಲಮಕ್ಕಿ ಮತ್ತು ಯಕ್ಷೆಮಠ ವಾರ್ಡ್ನವರಿಗೆ ಗುಂಡ್ಮಿ ಗ್ರಾಮದ ಯಕ್ಷಗಾನ ಕಲಾಕೇಂದ್ರದಲ್ಲಿ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.