ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಸದಸ್ಯತ್ವ ನೋಂದಣಿಗೆ ಚಾಲನೆ: ಶೋಭಾ ಕರಂದ್ಲಾಜೆ

ಉಡುಪಿ: ಜಿಲ್ಲೆಯಲ್ಲಿ  ಬಿಜೆಪಿ ಸದಸ್ಯತ್ವ ನೋಂದಣಿಗೆ ಚಾಲನೆ  ಸಿಕ್ಕಿದ್ದು ಈ ಬಾರಿ  2 ಲಕ್ಷದ ಗುರಿ ಇಟ್ಟುಕೊಳ್ಳಲಾಗಿದೆ  ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ, ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಶನಿವಾರ  ಜಿಲ್ಲಾ ಮತ್ತು ನಗರ ಬಿಜೆಪಿ ವತಿಯಿಂದ ‘ಸಂಘಟನಾ ಪರ್ವ’ದ ಅಂಗವಾಗಿ ಸದಸ್ಯತ್ವ ನೋಂದಣಿ ಅಭಿಯಾನವನ್ನು ಮಣಿಪಾಲ ಬಸ್ ನಿಲ್ದಾಣದ ಬಳಿ ಬಲೂನು ಹಾರಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ಬಾರಿ 1.7 ಲಕ್ಷ ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ.  ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 1.9 ಕೋಟಿ ಮತಗಳನ್ನು ಪಡೆದ ಬಿಜೆಪಿ 171 ವಿಧಾನಸಭಾ ಕ್ಷೇತ್ರಗಳಲ್ಲಿ ಇತರ ಪಕ್ಷಗಳಿಗಿಂತ ಹೆಚ್ಚು ಮತಗಳನ್ನು ಪಡೆದಿದೆ. ಜಿಲ್ಲೆಯ ಪ್ರತಿ ಬೂತ್‌ನಲ್ಲಿ 200 ಸದಸ್ಯರನ್ನು ನೋಂದಾಯಿಸುವ ಗುರಿ ಇದೆ ಎಂದರು.

ಆ. 11ರವರೆಗೆ ಮಿಸ್ಡ್‌ಕಾಲ್ ಕೊಡುವ ಮೂಲಕ ಸದಸ್ಯತ್ವ ಪಡೆಯಬಹುದು. 25 ಸದಸ್ಯರನ್ನು ನೋಂದಾಯಿಸುವವರು ಸಕ್ರಿಯ ಸದಸ್ಯರಾಗುತ್ತಾರೆ. ಆ.11ರಿಂದ 31ರವರೆಗೆ ಸಕ್ರಿಯ ಸದಸ್ಯರ ನೋಂದಣಿ ನಡೆಯಲಿದೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ , ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಸದಸ್ಯತ್ವ ಅಭಿಯಾನದ ಸಂಚಾಲಕ ಕುಯ್ಲಡಿ ಸುರೇಶ್ ನಾಯಕ್, ಮಹೇಶ್ ಠಾಕೂರ್, ಶಾಸಕ ಕೆ.ರಘುಪತಿ ಭಟ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ತಾಲೂಕು ಪಂಚಾಯಿತಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ನಗರಸಭಾ ಸದಸ್ಯರಾದ ಮಂಜುನಾಥ ಮಣಿಪಾಲ, ಕಲ್ಪನಾ ಸುದಾಮ, ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯಕುಮಾರ ಶೆಟ್ಟಿ, ಪೆರ್ಣಂಕಿಲ ಶ್ರೀಶ ನಾಯಕ್ ಉಪಸ್ಥಿತರಿದ್ದರು.