ಬೆಂಗಳೂರು: ರಾಜಧಾನಿ ಸೇರಿ ಹದಿನಾಲ್ಕು ಜಿಲ್ಲೆಗಳಲ್ಲಿ ಇನ್ನು ಕೆಲವು ದಿನ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆಯು ನೀಡಿದೆ. ಮುಂದಿನ ಮೂರು ದಿನ ಕಾಲ ಬೆಂಗಳೂರು ಸೇರಿದಂತೆ ಹದಿನಾಲ್ಕು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದೆ.
ಕರ್ನಾಟಕದ ಹಲವೆಡೆ ಮುಂದಿನ ನಾಲ್ಕು ದಿನಗಳ ಕಾಲ ಗಂಟೆಗೆ 30 ರಿಂದ 40 ಕಿ.ಮಿ ವೇಗದಲ್ಲಿ ಗಾಳಿ ಬೀಸಲಿದೆ. ಕರಾವಳಿ ಭಾಗದಲ್ಲಿ ಇದು ಇನ್ನೂ ಹೆಚ್ಚಿದ್ದು, 40 ರಿಂದ 45 ಕಿ.ಮಿ. ವೇಗದಲ್ಲಿ ಬೀಸಬಹುದು. ಕೆಲವು ಕಡೆ ಇದು ಗಂಟೆಗೆ 55 ಕಿ.ಮಿ. ಕೂಡ ದಾಟಬಹುದು. ಕರಾವಳಿ ಭಾಗದಲ್ಲಿ ಗಾಳಿ ಕಾರಣದಿಂದ ಮೀನುಗಾರಿಕೆಯಲ್ಲಿ ತೊಡಗುವವರು ಆಳ ಪ್ರದೇಶಕ್ಕೆ ಹೋಗದಂತೆ ಭಾರತೀಯ ಹವಾಮಾನ ಇಲಾಖೆಯು ಮುನ್ನೆಚ್ಚರಿಕೆ ನೀಡಿದೆ.
ಬೆಂಗಳೂರು, ಮೈಸೂರು, ದಾವಣಗೆರೆ, ಕೊಡಗು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ರಾಮನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳಲ್ಲಿ ಸೋಮವಾರ ಗುಡುಗು ಸಹಿತ ಉತ್ತಮ ಮಳೆಯಾಗುವ ವರದಿ ನೀಡಲಾಗಿದೆ.