ಮಹಿಳಾ ಅಂಧರ ಕ್ರಿಕೆಟ್ ತಂಡಕ್ಕೆ ಚಿನ್ನ ಪದಕ ಗೆದ್ದ ಹಿನ್ನೆಲೆ: ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ : ಅಂತಾರಾಷ್ಟ್ರೀಯ ಅಂಧರ ಕ್ರೀಡಾ ಒಕ್ಕೂಟದ ವರ್ಲ್ಡ್ ಗೇಮ್ಸ್ 2023 ರ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 9 ವಿಕೆಟ್‌ಗಳಿಂದ ಮಣಿಸಿದ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡ ಚಿನ್ನದ ಪದಕ ಗೆಲ್ಲುವ ಮೂಲಕ ನಿನ್ನೆ (ಶನಿವಾರ) ಹೊಸ ಇತಿಹಾಸ ನಿರ್ಮಿಸಿದೆ.ಐತಿಹಾಸಿಕ ಪದಕ ವಿಜೇತ ಮಹಿಳಾ ಕ್ರಿಕೆಟ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, “ನಿಮ್ಮ ಯಶಸ್ಸಿನಿಂದ ಇಡೀ ದೇಶವೇ ಹೆಮ್ಮೆಯಿಂದ ಬೀಗುತ್ತಿದೆ” ಎಂದು ಹೇಳಿದ್ದಾರೆ.

ಐಬಿಎಸ್‌ಎ ವಿಶ್ವ ಕ್ರೀಡಾಕೂಟದಲ್ಲಿ ಮಹಿಳಾ ಅಂಧರ ಕ್ರಿಕೆಟ್ ತಂಡವು ಚಿನ್ನದ ಪದಕ ಗೆದ್ದಿದ್ದು, ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಈ ಕುರಿತು ಎಕ್ಸ್ ಆಯಪ್ನಲ್ಲಿ ಸಂತಸ ಹಂಚಿಕೊಂಡಿರುವ ಮೋದಿ, “ಇಂಟರ್‌ನ್ಯಾಶನಲ್ ಬ್ಲೈಂಡ್ ಸ್ಪೋರ್ಟ್ಸ್ ಫೆಡರೇಶನ್ ವರ್ಲ್ಡ್ ಗೇಮ್ಸ್‌ನಲ್ಲಿ (IBSA) ಚಿನ್ನ ಗೆದ್ದ ಭಾರತೀಯ ಮಹಿಳಾ ಅಂಧರ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು. ನಮ್ಮ ಕ್ರೀಡಾಪಟುಗಳು ಅದ್ಭುತ ಸಾಧನೆ ಮಾಡಿದ್ದಾರೆ. ಈ ಸಾಧನೆ ದೇಶಕ್ಕೆ ಹೆಮ್ಮೆ ತಂದಿದೆ” ಎಂದು ಕೊಂಡಾಡಿದ್ದಾರೆ.

ಮತ್ತೊಂದೆಡೆ, ಭಾರತದ ಪುರುಷರ ಅಂಧರ ಕ್ರಿಕೆಟ್ ತಂಡವು ಐಬಿಎಸ್‌ಎ ವಿಶ್ವ ಕ್ರೀಡಾಕೂಟದಲ್ಲಿ ಫೈನಲ್ ತಲುಪಿದೆ. ಅಂತಿಮ ಪಂದ್ಯದಲ್ಲಿ ಭಾರತವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಸೆಣಸಾಡಲು ಸಜ್ಜಾಗುತ್ತಿದೆ.

ಐಬಿಎಸ್‌ಎ ವಿಶ್ವ ಕ್ರೀಡಾಕೂಟ: ವರ್ಲ್ಡ್ ಬ್ಲೈಂಡ್ ಗೇಮ್ಸ್ ಅಂತಾರಾಷ್ಟ್ರೀಯ ಬಹುಕ್ರೀಡಾ ಕಾರ್ಯಕ್ರಮವಾಗಿದ್ದು, ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುತ್ತದೆ. ಇಂಟರ್‌ನ್ಯಾಷನಲ್ ಬ್ಲೈಂಡ್ ಸ್ಪೋರ್ಟ್ಸ್ ಫೆಡರೇಶನ್ (ಐಬಿಎಸ್‌ಎ) ಆಯೋಜಿಸುತ್ತದೆ. ಇಲ್ಲಿ ನಡೆಯುವ ಕ್ರೀಡೆಗಳಲ್ಲಿ ಅಂಧ ಮತ್ತು ಭಾಗಶಃ ದೃಷ್ಟಿ ಹೊಂದಿರುವ ಕ್ರೀಡಾಪಟುಗಳು ಸ್ಪರ್ಧಿಸಲು ಅನುವು ಮಾಡಿಕೊಡಲಾಗುತ್ತದೆ. 1998ರಲ್ಲಿ ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿ ಮೊದಲ ಕ್ರೀಡಾಕೂಟ ನಡೆದಿತ್ತು. (ಪಿಟಿಐ)

ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆಸೀಸ್‌ ತಂಡವನ್ನು ಮಣಿಸಿದ ಭಾರತದ ನಾರಿಯರು ದಾಖಲೆ ಬರೆದರು. ಆಸೀಸ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 114 ರನ್ ಕಲೆಹಾಕಿತ್ತು. ಎರಡನೇ ಇನ್ನಿಂಗ್ಸ್ ವೇಳೆ ಮಳೆ ಸುರಿದಿದ್ದು, ಆಟವನ್ನು ಡಿಎಲ್ಎಸ್ ನಿಯಮದಂತೆ 9 ಓವರ್‌ಗಿಳಿಸಿ ಭಾರತಕ್ಕೆ 43 ರನ್ಗಳ ಗುರಿ ನೀಡಲಾಯಿತು. ಈ ಗುರಿ ಬೆನ್ನತ್ತಿದ ಭಾರತ, ಕೇವಲ 3.3 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 43 ರನ್ ಬಾರಿಸುವ ಮೂಲಕ ಗೆಲುವು ಸಾಧಿಸಿತು. ಇದೇ ಮೊದಲ ಬಾರಿಗೆ ಐಬಿಎಸ್‌ಎ ವಿಶ್ವ ಕ್ರೀಡಾಕೂಟದಲ್ಲಿ ಭಾರತದ ಮಹಿಳೆಯರು ಚಿನ್ನದ ಸಾಧನೆ ತೋರಿದ್ದಾರೆ.