ಭಾರತದ ಮೊದಲ ಮಾನವ ಸಹಿತ ಅಂತರಿಕ್ಷ ಯಾತ್ರೆ ಗಗನಯಾನ್ ಗೆ ಭರದ ಸಿದ್ದತೆ: ಅಕ್ಟೋಬರ್ ನಲ್ಲಿ ಆಕಾಶಕ್ಕೆ ಹಾರಲಿದೆ ವೋಮಮಿತ್ರ ರೊಬೋಟ್

ನವದೆಹಲಿ: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಶನಿವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಗಗನಯಾನ್ ಮಿಷನ್ ಕುರಿತು ಪ್ರಮುಖ ಮಾಹಿತಿಯನ್ನು ನೀಡಿ ಪ್ರಯೋಗಗಳು ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದರು. ಮಿಷನ್‌ನ ಎರಡನೇ ಹಂತವು ‘ವ್ಯೋಮಮಿತ್ರ’ (ಬಾಹ್ಯಾಕಾಶ-ವಿಹಾರ ಮಾಡುವ ಹ್ಯುಮನಾಯ್ಡ್ ರೋಬೋಟ್) ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ ಎಂದು ಅವರು ಹೇಳಿದರು.

ಈ ಎರಡು ಹಂತಗಳ ನಂತರ, ಗಗನಯಾನ್ ಯೋಜನೆಯ ಮಾನವಸಹಿತ ಮಿಷನ್‌ನ ಭಾಗವಾಗಿ ಒಂದರಿಂದ ಮೂರರ ನಡುವಿನ ಸಂಖ್ಯೆಯ ಗಗನಯಾತ್ರಿಗಳನ್ನು ಕಳುಹಿಸಲಾಗುತ್ತದೆ. ಇದು 2024 ರ ವೇಳೆಗೆ ಪ್ರಾರಂಭವಾಗಬಹುದು ಎಂದು ನಾನು ಭಾವಿಸುತ್ತೇನೆ ಎಂದು ಸಿಂಗ್ ಹೇಳಿದರು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರ ಪ್ರಕಾರ, ಕೋವಿಡ್-19 ಕಾರಣದಿಂದಾಗಿ ಗಗನಯಾನ್ ವಿಳಂಬವಾಯಿತು.

ಬಾಹ್ಯಾಕಾಶದಲ್ಲಿ ಮಾನವರು ಹೇಗೆ ವರ್ತಿಸುತ್ತಾರೆ ಎಂಬುದನ್ನು ನಿರ್ಣಯಿಸಲು ಹಾಗೂ ಕೆಲವು ಕಾರ್ಯಗಳನ್ನು ನಿರ್ವಹಿಸಲು ವ್ಯೋಮಮಿತ್ರವನ್ನು ವಿನ್ಯಾಸಗೊಳಿಸಲಾಗಿದೆ. ಇದು ಗಗನಯಾತ್ರಿಗಳು ನಿರ್ವಹಿಸುವ ಎಲ್ಲಾ ಚಟುವಟಿಕೆಗಳನ್ನು ಅನುಕರಿಸುತ್ತದೆ. ಯಾತ್ರಿಗಳ ಸುರಕ್ಷತೆಗಾಗಿ ಮುಂಚಿತವಾಗಿಯೆ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗುತ್ತಿದೆ ಎಂದರು.

ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಮಿಷನ್ ಗಗನಯಾನ್ ಮಾನವ ಬಾಹ್ಯಾಕಾಶ ಹಾರಾಟದ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ಇದು ಮೂರು ದಿನಗಳ ಕಾರ್ಯಾಚರಣೆಗಾಗಿ 400 ಕಿಮೀ ದೂರದ ಕಕ್ಷೆಗೆ ಮೂವರು ಸದಸ್ಯರ ಸಿಬ್ಬಂದಿಯನ್ನು ಉಡಾವಣೆ ಮಾಡುತ್ತದೆ ಮತ್ತು ಅವರನ್ನು ಸುರಕ್ಷಿತವಾಗಿ ಭೂಮಿಗೆ ತರುತ್ತದೆ ಎಂದು ಇಸ್ರೋದ ವೆಬ್‌ಸೈಟ್ ಹೇಳಿದೆ. ಭಾರತ ತನ್ನದೇ ಆದ ರಾಕೆಟ್ ಕ್ಯಾಪ್ಸೂಲ್ ನಲ್ಲಿ ತನ್ನ ದೇಶದ ನಾಗರಿಕರನ್ನು ಇದೇ ಮೊದಲ ಬಾರಿಗೆ ಅಂತರಿಕ್ಷಕ್ಕೆ ಕಳುಹಿಸಿ ಸುರಕ್ಷಿತವಾಗಿ ಮರಳಿ ಕರೆತರಲಿದೆ.