ರಾಷ್ಟ್ರೀಕೃತ ಬ್ಯಾಂಕ್ ವಿಲೀನ ಸಹಕಾರಿ ಕ್ಷೇತ್ರದ ಮೇಲೆ‌ ಪರಿಣಾಮ ಬೀರಲ್ಲ: ಜಿ.ಆರ್. ಪ್ರಸಾದ್

ಉಡುಪಿ: ಸಹಕಾರ ಕ್ಷೇತ್ರದ ವಾತಾವರಣ ಸದ್ಯ ವಿಷಮ ಸ್ಥಿತಿಯಲ್ಲಿದ್ದು, ಅದನ್ನು
ಉತ್ತಮವಾಗಿ ನಡೆಸಲು ಪ್ರೇರೇಪಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ
ಪ್ರಕ್ರಿಯೆಯೂ ಸಹಕಾರಿ ಕ್ಷೇತ್ರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು
ಮಂಗಳೂರಿನ ಪ್ರಣವ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಆರ್‌. ಪ್ರಸಾದ್‌ ಹೇಳಿದರು.
ಉಡುಪಿ ಜಿಲ್ಲಾ ಸೌಹಾರ್ದ ಒಕ್ಕೂಟ ಮತ್ತು ಬೆಳಗಾವಿಯ ಫಾರ್ಚೂನ್‌ ಇನೋಸರ್ವ್‌
ಪ್ರೈ.ಲಿ. ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಗರದ ಡಯಾನ ಹೋಟೆಲ್‌ನ ಸಭಾಂಗಣದಲ್ಲಿ ಶನಿವಾರ ನಡೆದ ಸಹಕಾರಿ ಕ್ಷೇತ್ರ ಸಂವರ್ಧನೆಯಿಂದ ಸಮೃದ್ಧಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಮಾತನಾಡಿದರು.
ವ್ಯವಹಾರ ಕ್ಷೇತ್ರದ ಜತೆಗೆ ದೇಶದ ಆಗುಹೋಗುಗಳ ಬಗ್ಗೆಯೂ ತಿಳಿದುಕೊಂಡಿರಬೇಕು.
ಬ್ಯಾಂಕಿಂಗ್‌ ಚಟುವಟಿಕೆಯೊಂದಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಹಕಾರಿ ಕ್ಷೇತ್ರವನ್ನು ಸಮಾಜಕ್ಕೆ ಸ್ಪಂದಿಸುವಂತೆ ಮಾಡಬೇಕು ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಸಹಕಾರ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಸಿಬ್ಬಂದಿ ವರ್ಗದ ಸಹಕಾರ ಅತೀ ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಎಸ್‌.ಕೆ.
ಮಂಜುನಾಥ್‌ ಮಾತನಾಡಿ, ಪ್ರಪಂಚ ವೇಗವಾಗಿ ಬೆಳೆಯುತ್ತಿದ್ದು, ನಮ್ಮ ಆರ್ಥಿಕತೆಯೂ ಅಭಿವೃದ್ಧಿ ಹೊಂದುತ್ತಿದೆ. ಕಡಿಮೆ ಬಡ್ಡಿದರದಲ್ಲಿ ಹೂಡಿಕೆ ಮಾಡುವಂತಹ ಉದ್ಯಮಗಳನ್ನು ಪ್ರೋತ್ಸಾಹಿಸಬೇಕು. ತಂತ್ರಜ್ಞಾನಗಳನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಕಾರ್ಯನಿರ್ವಹಿಸಬೇಕು. ಇದು ಸಹಕಾರಿ ಕ್ಷೇತ್ರದ ಅಭಿವೃದ್ಧಿ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಬೆಳಗಾವಿಯ -ಫಾರ್ಚೂನ್‌ ಇನೋಸರ್ವ್‌ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಪ್ರವೀಣ್‌ ಬಂಗೋಡಿ, ಮಂಗಳೂರಿನ ವಿಶ್ವ ಬೆಳಕು ಸೌಹಾರ್ದ ಸಹಕಾರಿಯ ಅಧ್ಯಕ್ಷ ಪ್ರಕಾಶ್‌ ಕೋಟ್ಯಾನ್‌, ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭುವನೇಶ್‌ ಪ್ರಭು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಉಪಾಧ್ಯಕ್ಷ ಬಿ. ಮಧುಸೂದನ ನಾಯಕ್‌
ಸ್ವಾಗತಿಸಿ, ಪ್ರಭಾಕರ ಸಿರಿಯಾರ ವಂದಿಸಿದರು. ಅನಂತರಾಮ್‌ ಭಟ್‌ ಕಾರ್ಯಕ್ರಮ
ನಿರೂಪಿಸಿದರು.