ಪ್ರಧಾನಿ ಮೋದಿ ಇಸ್ರೋ ಭೇಟಿ: ವಿಕ್ರಮ್ ಲ್ಯಾಂಡರ್‌ನ ಟಚ್‌ಡೌನ್ ಪಾಯಿಂಟ್ ಗೆ ‘ಶಿವಶಕ್ತಿ’ ಹೆಸರು; ಆಗಸ್ಟ್ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಣೆ

ಬೆಂಗಳೂರು: ಯಶಸ್ವಿ ಚಂದ್ರಯಾನ-3 (Chandrayan-3) ಮಿಷನ್ ಹಿಂದೆ ಹಗಲಿರುಳೆನ್ನದೆ ದುಡಿದ ಇಸ್ರೋ(ISRO) ತಂಡವನ್ನು ಇಂದು ಬೆಳಿಗ್ಗೆ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಕ್ರಮ್ ಲ್ಯಾಂಡರ್‌ನ ಟಚ್‌ಡೌನ್ ಪಾಯಿಂಟ್ ಅನ್ನು ಇನ್ನು ಮುಂದೆ ‘ಶಿವಶಕ್ತಿ’ (ShivaShakti) ಎಂದು ಕರೆಯಲಾಗುವುದು ಮತ್ತು ಚಂದ್ರಯಾನ-2 ರ ಚಂದ್ರನ ಲ್ಯಾಂಡಿಂಗ್ ಪಾಯಿಂಟ್ ಅನ್ನು ‘ತಿರಂಗ’ (Tiranga) ಎಂದು ಕರೆಯಲಾಗುವುದು ಎಂದು ಘೋಷಿಸಿದರು.  ವಿಕ್ರಮ್ ಲ್ಯಾಂಡರ್ (VIkram Lander) ಚಂದ್ರನ ಮೇಲೆ ಇಳಿದ ಆಗಸ್ಟ್ 23 ಅನ್ನು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ಎಂದು ಘೋಷಿಸಿದರು. “ಭಾರತದ ವೈಜ್ಞಾನಿಕ ಮನೋಭಾವವನ್ನು ಈಗ ಜಗತ್ತು ಶ್ಲಾಘಿಸುತ್ತಿದೆ” ಎಂದು ಪ್ರಧಾನಿ ಮೋದಿ ಹೇಳಿದರು. ಇಸ್ರೋ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡುವಾಗ ಅವರು ಭಾವುಕರಾಗಿದ್ದರು.

ಚಂದ್ರಯಾನ 3 ರಲ್ಲಿ ಮಹಿಳಾ ವಿಜ್ಞಾನಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ..ಈ ‘ಶಿವಶಕ್ತಿ’ ಪಾಯಿಂಟ್ ಮುಂಬರುವ ಪೀಳಿಗೆಗೆ ವಿಜ್ಞಾನವನ್ನು ಜನರ ಕಲ್ಯಾಣಕ್ಕಾಗಿ ಬಳಸಲು ಪ್ರೇರೇಪಿಸುತ್ತದೆ. ಜನರ ಕಲ್ಯಾಣವೇ ನಮ್ಮ ಪರಮೋಚ್ಚ ಬದ್ಧತೆ..” ಎಂದು ಬೆಂಗಳೂರಿನ ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಪ್ರಧಾನಿ ಮೋದಿ ಹೇಳಿದರು.

ಭಾರತವು ಚಂದ್ರನ ಮೇಲಿದೆ. ನಾವು ನಮ್ಮ ರಾಷ್ಟ್ರೀಯ ಹೆಮ್ಮೆಯನ್ನು ಚಂದ್ರನ ಮೇಲೆ ಇರಿಸಿದ್ದೇವೆ. ಇದು ಭಾರತ, ಇದು ನವೀನವಾಗಿ ಮತ್ತು ಅನನ್ಯವಾಗಿ ಯೋಚಿಸುತ್ತದೆ. ಈ ಭಾರತವು ಕತ್ತಲೆ ಪ್ರದೇಶಗಳಿಗೆ ಹೋಗುತ್ತದೆ ಮತ್ತು ಬೆಳಕನ್ನು ಹರಡುವ ಮೂಲಕ ಜಗತ್ತನ್ನೇ ಬೆಳಗಿಸುತ್ತದೆ ಎಂದು ಅವರು ಹೇಳಿದರು.

ಯಶಸ್ವಿ ಚಂದ್ರಯಾನ-3 ಮಿಷನ್‌ನಲ್ಲಿ ಇಸ್ರೋವನ್ನು ಶ್ಲಾಘಿಸಿದ ಪ್ರಧಾನಿ ನರೇಂದ್ರ ಮೋದಿ, ನೀವು ‘ಮೇಕ್ ಇನ್ ಇಂಡಿಯಾ’ ಅನ್ನು ಚಂದ್ರನ ಮೇಲೆ ತೆಗೆದುಕೊಂಡು ಹೋಗಿದ್ದೀರಿ ಎಂದು ಹೇಳಿದರು.

ನೀವು ಇಡೀ ಪೀಳಿಗೆಯನ್ನು ಜಾಗೃತಗೊಳಿಸಿದ್ದೀರಿ ಮತ್ತು ಅವರ ಮೇಲೆ ಆಳವಾದ ಮುದ್ರೆಯನ್ನು ಒತ್ತಿದ್ದೀರಿ ಎಂದರು.

ಏತನ್ಮಧ್ಯೆ ಪ್ರಗ್ಯಾನ್ ರೋವರ್ ವಿಕ್ರಮ್ ಲ್ಯಾಂಡರ್ ನ ಹೊರಗೆ ಬಂದು ಚಂದ್ರನ ಅಂಗಳದ ಮೇಲೆ ನಡೆಯುವ ವಿಡೀಯೋವನ್ನು ಇಸ್ರೋ ಹಂಚಿಕೊಂಡಿದೆ.