ಬೆಂಗಳೂರು: ಆಫ್ಲೈನ್ ಮೂಲಕ ಮಾಡಬಹುದಾದ ಸಣ್ಣ ಮೊತ್ತದ ಡಿಜಿಟಲ್ ಪೇಮೆಂಟ್ ಮಿತಿಯನ್ನು 200 ರೂಪಾಯಿಗಳಿಂದ 500 ರೂಪಾಯಿಗಳಿಗೆ ಆರ್ಬಿಐ ಹೆಚ್ಚಿಸಿದೆ.ಇತ್ತೀಚೆಗೆ ನಡೆದ ದ್ವೈಮಾಸಿಕ ನೀತಿ ಪರಾಮರ್ಶೆ ಸಭೆಯಲ್ಲಿ ಆರ್ಬಿಐ ಈ ನಿರ್ಧಾರ ಘೋಷಿಸಿತ್ತು. ಇದೀಗ ನಿರ್ಧಾರ ಜಾರಿಗೆ ಬಂದಿದೆ. ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, 2007 (2007 ರ ಕಾಯ್ದೆ 51) ರ ಸೆಕ್ಷನ್ 10 (2) ಮತ್ತು ಸೆಕ್ಷನ್ 18 ರ ಅಡಿಯಲ್ಲಿ ಹೊಸ ನೀತಿಯನ್ನು ಜಾರಿಗೊಳಿಸಲಾಗಿದ್ದು, ಇದು ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಆರ್ಬಿಐ ತಿಳಿಸಿದೆ.ಆಫ್ಲೈನ್ ಮೂಲಕ ಮಾಡುವ ಡಿಜಿಟಲ್ ಪೇಮೆಂಟ್ ಮಿತಿಯನ್ನು 200 ರೂಪಾಯಿಗಳಿಂದ 500 ರೂಪಾಯಿಗೆ ಹೆಚ್ಚಿಸಲಾಗಿದೆ.
ಜನವರಿ 2022 ರಲ್ಲಿ, ಆರ್ಬಿಐ “ಆಫ್ಲೈನ್ ಮೋಡ್ನಲ್ಲಿ ಸಣ್ಣ ಮೌಲ್ಯದ ಡಿಜಿಟಲ್ ಪಾವತಿಗಳನ್ನು ಸುಗಮಗೊಳಿಸುವ ನೀತಿ” ಯನ್ನು ಘೋಷಿಸಿತ್ತು. ಇದರ ಪ್ರಕಾರ ಪ್ರತಿ ವಹಿವಾಟಿಗೆ 200 ರೂಪಾಯಿಗಳವರೆಗೆ ಆಫ್ಲೈನ್ ಮೋಡ್ನಲ್ಲಿ ಪಾವತಿ ಮಾಡಬಹುದಾಗಿತ್ತು ಹಾಗೂ ಇದಕ್ಕೆ ಒಟ್ಟಾರೆ 2,000 ರೂ.ಗಳ ಮಿತಿ ವಿಧಿಸಲಾಗಿತ್ತು. ಗ್ರಾಮೀಣ ಮತ್ತು ಸಣ್ಣ ನಗರ ಪ್ರದೇಶಗಳಲ್ಲಿ ಡಿಜಿಟಲ್ ವಹಿವಾಟುಗಳನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿತ್ತು.
ಈ ವಹಿವಾಟುಗಳಿಗೆ ಹೆಚ್ಚುವರಿ ದೃಢೀಕರಣ ಹಂತದ (ಎಎಫ್‌ಎ) ಅಗತ್ಯವಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ವಹಿವಾಟುಗಳು ಆಫ್ಲೈನ್ ಆಗಿರುವುದರಿಂದ ಕೆಲ ಸಮಯದ ನಂತರ ಗ್ರಾಹಕರಿಗೆ ವಹಿವಾಟಿನ ನೋಟಿಫಿಕೇಶನ್ಗಳು (ಎಸ್‌ಎಂಎಸ್ ಮತ್ತು / ಅಥವಾ ಇ-ಮೇಲ್ ಮೂಲಕ) ಬರುತ್ತವೆ.ಆಫ್ಲೈನ್ ಡಿಜಿಟಲ್ ಪಾವತಿ ಎಂದರೆ, ಇಂಟರ್ನೆಟ್ ಅಥವಾ ಟೆಲಿಕಾಂ ಸಂಪರ್ಕದ ಅಗತ್ಯವಿಲ್ಲದ ವಹಿವಾಟು ಎಂದರ್ಥ. ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್ಸಿಎಂಸಿ) ಮತ್ತು ಯುಪಿಐ ಲೈಟ್ ಬಳಸಿ ಆಫ್ಲೈನ್ ಮೋಡ್ನಲ್ಲಿ ಸಣ್ಣ ಮೌಲ್ಯದ ಡಿಜಿಟಲ್ ಪಾವತಿಗಳನ್ನು ಮಾಡಬಹುದು. ಆಫ್ಲೈನ್ ಮೋಡ್ ಅಡಿಯಲ್ಲಿ ಕಾರ್ಡ್ಗಳು, ವ್ಯಾಲೆಟ್ಗಳು ಮತ್ತು ಮೊಬೈಲ್ ಸಾಧನಗಳಂತಹ ಯಾವುದೇ ಚಾನೆಲ್ ಅಥವಾ ಸಾಧನವನ್ನು ಬಳಸಿಕೊಂಡು ಮುಖಾಮುಖಿ (ಸಾಮೀಪ್ಯ ಮೋಡ್) ಪಾವತಿಗಳನ್ನು ನಡೆಸಬಹುದು.
ಸಣ್ಣ ಮೌಲ್ಯದ ವಹಿವಾಟುಗಳಿಗೆ ಎರಡು ಹಂತದ ದೃಢೀಕರಣದ ಅಗತ್ಯವನ್ನು ತೆಗೆದುಹಾಕುವ ಮೂಲಕ ಈ ಚಾನೆಲ್ಗಳು ದೈನಂದಿನ ಸಣ್ಣ ಮೊತ್ತದ ಪಾವತಿಗಳು, ಸಾರಿಗೆ ಪಾವತಿಗಳು ಇತ್ಯಾದಿಗಳಿಗೆ ವೇಗದ, ವಿಶ್ವಾಸಾರ್ಹ ಮತ್ತು ಸಂಪರ್ಕರಹಿತ ಪಾವತಿ ವಿಧಾನವನ್ನು ಜನರಿಗೆ ನೀಡುತ್ತವೆ ಎಂದು ಕೇಂದ್ರ ಬ್ಯಾಂಕ್ ನೀತಿಯಲ್ಲಿ ತಿಳಿಸಿದೆ.
ಆಗಸ್ಟ್ 2020 ರಲ್ಲಿ ಬಳಕೆದಾರರ ಹಿತಾಸಕ್ತಿಯನ್ನು ರಕ್ಷಿಸಲು ಅಂತರ್ನಿರ್ಮಿತ ವೈಶಿಷ್ಟ್ಯಗಳೊಂದಿಗೆ ಆಫ್-ಲೈನ್ ಮೋಡ್ನಲ್ಲಿ ಸಣ್ಣ ಮೌಲ್ಯದ ಪಾವತಿಗಳನ್ನು ಅನುಮತಿಸಲು ಕೇಂದ್ರ ಬ್ಯಾಂಕ್ ಪ್ರಸ್ತಾಪಿಸಿತ್ತು. ಇದರ ನಂತರ, ಇಂಟರ್ನೆಟ್ ಸಂಪರ್ಕ ಕಡಿಮೆ ಇರುವ ಅಥವಾ ಲಭ್ಯವಿಲ್ಲದ ಸಂದರ್ಭಗಳಲ್ಲಿ (ಆಫ್ಲೈನ್ ಮೋಡ್) ಚಿಲ್ಲರೆ ಡಿಜಿಟಲ್ ಪಾವತಿಗಳನ್ನು ಸಕ್ರಿಯಗೊಳಿಸುವ ನವೀನ ತಂತ್ರಜ್ಞಾನದ ಪ್ರಾಯೋಗಿಕ ಪರೀಕ್ಷೆಗಳನ್ನು ಆರ್ಬಿಐ ನಡೆಸಿತ್ತು.ಆಗಸ್ಟ್ 10 ರಂದು ಇಂಥ ಆಫ್ಲೈನ್ ಪಾವತಿಗಳ ಮಿತಿ ಹೆಚ್ಚಳವನ್ನು ಪ್ರಸ್ತಾಪಿಸಲಾಗಿತ್ತು. ಬಹುತೇಕ ಹೊಟೇಲ್ ಬಿಲ್ಗಳು ಅಥವಾ ಇನ್ನಿತರ ಖರ್ಚುಗಳು 200 ರೂಪಾಯಿಗೂ ಅಧಿಕವಾಗಿರುತ್ತವೆ. ಹೀಗಾಗಿ 200 ರೂಪಾಯಿ ಮಿತಿ ವಿಧಿಸುವುದರಿಂದ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜನರು ಬಳಸಲು ಸಾಧ್ಯವಾಗುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಮಿತಿಯನ್ನು 500 ರೂಪಾಯಿಗೆ ಹೆಚ್ಚಿಸಲಾಗಿದೆ.