ಕೊಡಗು: ಪ್ರೀತಿಸಿ, ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಸಾಲಿಗೆ ಹೊಸದಾಗಿ ಹರ್ಷಿಕಾ ಭುವನ್ ಸೇರಿದ್ದಾರೆ. ಹೌದು, ಇಂದು ಕೊಡವ ಪದ್ಧತಿಯಂತೆ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.ಕನ್ನಡ ಚಿತ್ರರಂಗದಲ್ಲಿ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಮದುವೆ ಸಂಭ್ರಮ ಮನೆ ಮಾಡಿದೆ.ಗುರುಹಿರಿಯರ, ಕುಟುಂಬಸ್ಥರ, ಆಪ್ತರ ಸಮ್ಮುಖದಲ್ಲಿ ವಿವಾಹ ಶಾಸ್ತ್ರಗಳು ನೆರವೇರಿತು. ಕೊಡಗಿನ ವಿರಾಜ್ ಪೇಟೆಯಲ್ಲಿ ಅಮ್ಮತಿ ಕೊಡವ ಸಮಾಜದಲ್ಲಿ ಮದುವೆ ಜರುಗಿದೆ. ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ನಟ – ನಟಿ ಮಿಂಚಿದರು. ಕೊಡವ ಸಂಪ್ರದಾಯದಂತೆ ಇಂದು ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಹಸೆಮಣೆ ಏರಿದರು.
ಸಮಾರಂಭಕ್ಕೆ ಸೆಲೆಬ್ರಿಟಿಗಳು ಸಾಕ್ಷಿ: ಪತಿ ರಘುಮುಖರ್ಜಿ ಜೊತೆ ಕೊಡವ ಸಂಪ್ರದಾಯದ ಸೀರೆಯುಟ್ಟು ನಟಿ ಅನು ಪ್ರಭಾಕರ್ ಆಗಮಿಸಿದರು. ನಿನ್ನೆಯಿಂದಲೇ ಮದುವೆ ಕಾರ್ಯಕ್ರಮದಲ್ಲಿ ನಟಿ ಅನುಪ್ರಭಾಕರ್ ಭಾಗಿಯಾಗಿದ್ದರು. ಅಲ್ಲದೇ ನಟ ಗಣೇಶ್, ಹಿರಿಯ ನಟ ದೊಡ್ಡಣ್ಣ ಸಹ ಕಾರ್ಯಕ್ರಮಕ್ಕೆ ಆಗಮಿಸಿ ಸಮಾರಂಭದ ಮೆರುಗು ಹೆಚ್ಚಿಸಿದರು.ಮದುವೆಗೆ ಆಗಮಿಸಿದ ರಾಜಕೀಯ ಮುಖಂಡರು: ಮದುವೆ ಸಮಾರಂಭಕ್ಕೆ ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಚಿವ ಮುರುಗೇಶ್ ನಿರಾಣಿ, ಸುಧಾಕರ್, ಶಾಸಕ ಪೊನ್ನಣ್ಣ ಸೇರಿದಂತೆ ಗಣ್ಯರು ಸಾಕ್ಷಿಯಾಗಿದ್ದರು. ಕೊಡವ ಸಂಪ್ರದಾಯದಂತೆ ಶೌರ್ಯ ಪ್ರದರ್ಶನ ಮಾಡುವ ರೀತಿಯಲ್ಲಿ ಮದುವೆ ಶಾಸ್ತ್ರದಲ್ಲಿ ಬಾಳೆ ಕಂಬ ಕಡಿಯುವ ಆಚರಣೆ ಕೂಡ ನಡೆಯಿತು.
ಇಲ್ಲಿ ಹಡುಗಿಯ ತಾಯಿ ಹುಡುಗನಿಗೆ ಸಂಬಂಧಿಸಿದ ಶಾಸ್ತ್ರ ನೆರವೇರಿಸುತ್ತಾರೆ. ಆರತಕ್ಷತೆ ಕಾರ್ಯಕ್ರಮ ಇರುವುದಿಲ್ಲ. ಬದಲಾಗಿ ಹುಡಗ ಹುಡುಗಿಯನ್ನು ವೇದಿಯಲ್ಲಿ ಮುಕ್ಕಾಲು (ಮೂರು ಕಾಲಿನ ಮಣೆ) ಮಣೆಯಲ್ಲಿ ಕೂರಿಸಲಾಗುತ್ತದೆ. ವೇದಿಕೆಗೆ ಬರುವ ಗಣ್ಯ ಅತಿಥಿಗಳು ಬೆಳ್ಳಿ ಪಾತ್ರೆಯೊಂದರಲ್ಲಿ ದಂಪತಿಗಳಿಗೆ ಹಾಲು ಕೊಟ್ಟು ಶುಭ ಕೋರುತ್ತಾರೆ. ಇನ್ನೂ ಊಟೋಪಚಾರಕ್ಕೆ ಕೊಡಗಿನ ಸಾಂಪ್ರದಾಯಿಕ ಅಡುಗೆಗಳು ಇದ್ದವು. ಮದುವೆಗೆ ಆಗಮಿಸಿದ ಅತಿಥಿಗಳು ಸಾಂಪ್ರದಾಯಿಕ ಭೋಜನ ಸವಿದರು. ಜೊತೆಗೆ ಕೊಡವ ವಾಲಗಕ್ಕೆ ಸಖತ್ ಸ್ಟೇಪ್ ಹಾಕಿದ್ರು.
ಪ್ರೀತಿಗೆ ಮದುವೆ ಮುದ್ರೆ: ಕಳೆದ ಸುಮಾರು ಹತ್ತು ವರ್ಷಗಳಿಂದ ಸ್ನೇಹಿತರಾಗಿ ಗುರುತಿಸಿಕೊಂಡಿದ್ದ ಹರ್ಷಿಕಾ ಭುವನ್ ಜೋಡಿ ಅಂತಿಮವಾಗಿ ಇಂದು ಪತಿ ಪತ್ನಿಯರಾಗಿ ಹೊಸ ಜೀವ ಆರಂಭಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ವೃತ್ತಿಜೀವನ ಆರಂಭಿಸುವ ವೇಳೆ ಈ ಜೋಡಿ ಪರಸ್ಪರ ಭೇಟಿ ಆಗಿದ್ದಾರೆ. ಬಳಿಕ ಮಾತು ಆರಂಭಗೊಂಡು ಸ್ನೇಹಿತರಾಗಿದ್ದಾರೆ. ಇಂದು ದಾಂಪತ್ಯ ಜೀವನ ಶುರು ಹಚ್ಚಿಕೊಂಡಿದ್ದಾರೆ. ಅಭಿಮಾನಿಗಳು, ಚಿತ್ರರಂಗದವರು ನವ ಜೋಡಿಗೆ ಶುಭಾಶಯ ಕೋರುತ್ತಿದ್ದಾರೆ.
ಭುವನ್ ಕೊಡವ ಉಡುಪು ಕುಪ್ಪಚ್ಚಾಲೆಯಲ್ಲಿ ಮಿಂಚಿದ್ರೆ, ಹರ್ಷಿಕಾ ಕೊಡವ ಸೀರೆಯಲ್ಲಿ ಕಂಗೊಳಿಸಿದ್ರು. ಬೆಳಗ್ಗೆಯಿಂದಲೇ ತಾರಾ ಜೋಡಿಗಳಿಗೆ ವಿವಿಧ ರೀತಿಯ ಕೊಡವ ಶಾಸ್ತ್ರಗಳು ಜರುಗಿದವು. ಇಂದು ಹುಡಗ ಹುಡುಗಿ ಮನೆಗೆ ಬರುವ ಸಂಪ್ರದಾಯ. ಮೊದಲಿಗೆ ವೀರ ಶೌರ್ಯದ ಸಂಕೇತವಾಗಿ ಬಾಳೆ ದಿಂಡನ್ನು ಕಡಿಯುವ ಸಂಪ್ರದಾಯ ನಡೆಯಿತು. ಸಾಂಪ್ರದಾಯಿಕವಾಗಿ 12 ಬಾಳೆಗಳಲ್ಲಿ ಮೊದಲಿಗೆ 3 ಬಾಳೆಯನ್ನು ವಧು ಕಡೆಯಿಂದ ಮಾವ ಕಡಿಯೋದು, ಬಳಿಕ ಮೂರು ಬಾಳೆಯನ್ನು ವರನ ಮಾವ ಕಡಿಯುವಂತದ್ದು. ಇನ್ನುಳಿದ ಆರು ಬಾಳೆ ದಿಂಡನ್ನು ವರನ ಸಂಬಂಧಿ ಕಡಿಯುವಂತದ್ದು. ಬಳಿಕ ಹುಡಗನನ್ನು ವೇದಿಕೆಗೆ ಕರೆತರಲಾಗುತ್ತದೆ.
ಕೊಡವ ಮದುವೆ ಶಾಸ್ತ್ರ: ಎರಡು ದಿನಗಳ ಕಾಲ ಅದ್ಧೂರಿ ವಿವಾಹ ಕಾರ್ಯಕ್ರಮ ನಡೆಯಿತು. ಒಂದು ದಿನ ಮುಂಚಿತವಾಗಿ ಊರುಕೂಡುವ ಸಮಾರಂಭ ಹಾಗೂ ಮೆಹಂದಿ ಶಾಸ್ತ್ರ ನಡೆಯಿತು. ಕೊಡಗಿನಲ್ಲಿ ನಡೆಯುವ ಕೊಡವ ಮದುವೆ ಸಂಪ್ರದಾಯ ಕೊಂಚ ವಿಭಿನ್ನ. ಇಲ್ಲಿ ವರ ವಧುಗೆ ತಾಳಿ ಕಟ್ಟುವ ಸಂಪ್ರದಾಯ ಇಲ್ಲ. ಇಲ್ಲಿ ತಾಯಿಯೇ ಹುಡುಗಿಗೆ ತಾಳಿ ಹಾಕುವ ಸಂಪ್ರದಾಯ. ಅದನ್ನು ಕೊಡವ ಭಾಷೆಯಲ್ಲಿ ಪತ್ತಾಕ್ ಅಂತ ಕರೆಯುತ್ತಾರೆ.