ಬೊರಿವಿಲಿ: ಶ್ರೀ ಮಹಿಷಮರ್ಧಿನಿ ದೇವಸ್ಥಾನದಲ್ಲಿ ನಾಗರಪಂಚಮಿ ಆಚರಣೆ

ಬೊರಿವಿಲಿ: ಶ್ರೀ ಮಹಿಷಮರ್ಧಿನಿ ದೇವಸ್ಥಾನ ಜಯರಾಜ್ ನಗರ ಇಲ್ಲಿ ಆ. 21ರಂದು ಜರುಗಿದ ತುಳುನಾಡಿನ ಆರಾಧ್ಯ ನಾಗದೇವರ ನಾಗರಪಂಚಮಿ ಉತ್ಸವವು ಶ್ರದ್ಧಾಭಕ್ತಿಯೊಂದಿಗೆ ಜರುಗಿತು.

ಬೆಳಿಗ್ಗೆ ಪ್ರಾರಂಭಗೊಂಡ ನಾಗಾರಾಧನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಹಾಲು ಎಳನೀರು ಅರಿಶಿನ ವಿವಿಧ ಅಭಿಷೇಕ ತನು ತಂಬಿಲ ಅರ್ಪಿಸಿ ನಂತರ ನೈರ್ಮಲ್ಯಗೊಳಿಸಿ ಮೂರ್ತಿಯ ಪ್ರತಿಬಿಂಬವನ್ನು ಹೂ ಅಲಂಕಾರದಿಂದ ಶೃಂಗಾರಗೊಂಡ ನಾಗದೇವರಿಗೆ ವಿಶೇಷ ಪೂಜಾ ವಿಧಿ ವಿಧಾನಗಳು ಪುರೋಹಿತರಿಂದ ನೆರವೇರಿತು. ನಂತರ ಭಕ್ತರ ಸಮ್ಮುಖದಲ್ಲಿ ಮಹಾಮಂಗಳಾರತಿ ಜರುಗಿತು.

ನಾಗದೇವರ ಆರಾಧನೆ ಮನುಕುಲದಲ್ಲಿ ಪೂರ್ವಜರಿಂದ ಪರಂಪರೆಯಾಗಿ ಋತುವಿನ ಪ್ರಕೃತಿ ಆರಾಧನಾ ಹಬ್ಬವಾಗಿ ಆಚರಿಸಲ್ಪಡುತ್ತದೆ. ಈ ಹಬ್ಬವನ್ನು ಕೃತಜ್ಞತಾ ಭಾವದಿಂದ ಆರಾಧಿಸುವ ಮೂಲಕ ದೈಹಿಕ ಮಾನಸಿಕ ಹಾಗೂ ಆರೋಗ್ಯ ಸಂಪತ್ತು ನಾಗದೇವರ ಅನುಗ್ರಹದಿಂದ ಫಲಿಸುವುದು. ಸರ್ವ ತುಳು ಕನ್ನಡಿಗರ ಆಶೋತ್ತರದ ಆಧ್ಯಾತ್ಮಿಕ ತಾಣ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ವರ್ಷವಿಡೀ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ ಶೆಟ್ಟಿ ಹೇಳಿದರು.

ಪೃಥ್ವಿ ಮತ್ತು ವೃಕ್ಷದ ನಡುವಿನ ಅವಿನಾಭಾವ ಸಂಬಂಧ ಹೊಂದಿದ ನಾಗದೇವರು ಮಾನವ ಸಂಕುಲದ ಪ್ರಥಮ ದೈವೀ ಕಲಿಸಲ್ಪಟ್ಟ ಶಕ್ತಿಯಾಗಿದೆ. ದೇವಸ್ಥಾನ ನಾಗಬನಗಳಲ್ಲಿ ನಾಗ ಪಂಚಮಿಯನ್ನು ವಿಶೇಷ ಶ್ರದ್ಧಾಭಕ್ತಿಯಿಂದ ಆರಾಧಿಸಲ್ಪಡುತ್ತಿದ್ದು ಪೂರ್ವಿಕರ ಸಂಪ್ರದಾಯದಂತೆ ಸಮರ್ಪಣಾಭಾವದಿಂದ ಶಿಷ್ಟಾಚಾರದಿಂದ ಶ್ರದ್ಧಾ ಭಕ್ತಿಯಿಂದ ಆರಾಧಿಸುವ ನಾಡಿನ ಸಂಭ್ರಮದ ಹಬ್ಬವು ಎಲ್ಲರಿಗೂ ಸುಖ ಶಾಂತಿ ಸಂಮೃದ್ಧಿ ದೊರೆಯಲಿ ಎಂದು ಪುರೋಹಿತ ರಾಮ ಭಟ್ ಆಶೀರ್ವದಿಸಿ ಸಾಂಪ್ರದಾಯಿಕವಾಗಿ ಜರುಗಿದ ನಾಗಾರಾಧನೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ದರ್ಶನ ಪಡೆದ ಸರ್ವ ಭಕ್ತರಿಗೆ ಫಲ ಪುಷ್ಪ ಪ್ರಸಾದ ವಿತರಿಸಿ ಅನುಗ್ರಹಿಸಿ ಆಶೀರ್ವದಿಸಿದರು.

ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ದೇವಸ್ಥಾನದ ವಂಶಸ್ಥ ಸ್ಥಾಪಕ ಮೊಕ್ತೇಸರ ಜಯರಾಜ್ ಶ್ರೀಧರ ಶೆಟ್ಟಿ ಕುಟುಂಬಸ್ಥರು, ಶಾಳಿನಿ ಪ್ರದೀಪ್ ಸಿ ಶೆಟ್ಟಿ ಮೊಕ್ತೇಸರ ಜಯಪಾಲಿ ಅಶೋಕ್ ಶೆಟ್ಟಿ, ಬಾಲಕೃಷ್ಣ ರೈ, ಪಯ್ಯಡೆ ಗ್ರೂಪ್ ಅಫ್ ಹೋಟೆಲ್ಸ ನ ಡಾ. ಪಿ. ವಿ. ಶೆಟ್ಟಿ, ಬಿಲ್ಡರ್ ಗುರುದತ್ ಶೆಣೈ , ಜಯಂತ್ ಶೆಟ್ಟಿ, ಅಮೃತಾ ಜೆ ಶೆಟ್ಟಿ, ಬಂಟರ ಸಂಘ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಉಪಕಾರ್ಯಾಧ್ಯಕ್ಷ ಕೊಂಡಾಡಿ ಪ್ರೇಮ್ ನಾಥ್ ಶೆಟ್ಟಿ, ಸಂಚಾಲಕ ರವೀಂದ್ರ ಶೆಟ್ಟಿ ಶ್ರೀ ಗುರುದೇವ ಸೇವಾ ಬಳಗದ ಮಹಾರಾಷ್ಟ್ರ ಘಟಕದ ಗೌರವ ಪ್ರಧಾನ ಕಾರ್ಯದರ್ಶಿ ಪೇಟೆಮನೆ ರಜಿತ್ ಎಲ್ ಸುವರ್ಣ, ಮಾಧವ ಶೆಟ್ಟಿ ಬೆಳ್ಮಣ್ಣು ವೆಂಕಟರಮಣ ತಂತ್ರಿ ದೇವರಾಜ್ ನೆಲ್ಲಿ ಅರ್ಚಕ ವೃಂದ ಆಡಳಿತ ಮಂಡಳಿಯ ಸರ್ವ ಸದಸ್ಯರು ಮಹಿಷಮರ್ಧಿನಿ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಧಾರ್ಮಿಕ ಹಿತಚಿಂತಕರು ಗಣ್ಯರು ಸಾಂಪ್ರದಾಯಿಕವಾಗಿ ಜರುಗಿದ ನಾಗರಾಧನೆ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ದರ್ಶನ ಗೈದು ಫಲಪುಷ್ಪ ಪ್ರಸಾದ ಸ್ವೀಕರಿಸಿದರು.

ಚಿತ್ರ, ವರದಿ: ರಮೇಶ್ ಉದ್ಯಾವರ