‘Chandrayaan 3’ ಲ್ಯಾಂಡಿಂಗ್ ವರ್ಚುಯಲ್ ಆಗಿ ದಕ್ಷಿಣ ಆಫ್ರಿಕಾದಿಂದ ವೀಕ್ಷಿಸಲಿರುವ ಪ್ರಧಾನಿ

ಜೋಹಾನ್ಸ್‌ಬರ್ಗ್(ದಕ್ಷಿಣ ಆಫ್ರಿಕಾ): 15ನೇ ಬ್ರಿಕ್ಸ್ ಶೃಂಗಸಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಸೌತ್ ಆಫ್ರಿಕಾದ ಜೋಹಾನ್ಸ್‌ಬರ್ಗ್ ತಲುಪಿದ್ದಾರೆ.ಸೌತ್ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ವರ್ಚುಯಲ್ ಆಗಿ ವಿಕ್ರಮ್ ಲ್ಯಾಂಡರ್ ಯಶಸ್ವಿ ಲ್ಯಾಂಡಿಂಗ್ ವೀಕ್ಷಣೆ ಮಾಡಲಿದ್ದಾರೆ.ಹೀಗಾಗಿ ಸೌತ್ ಆಫ್ರಿಕಾದಿಂದಲೇ ಮೋದಿ ವರ್ಚುಯಲ್ ಆಗಿ ಐತಿಹಾಸಿಕ ವಿಕ್ರಮ್‌ ಲ್ಯಾಂಡರ್ ಲ್ಯಾಂಡಿಂಗ್ ವೀಕ್ಷಣೆ ಮಾಡಲಿದ್ದಾರೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ 3 ಚಂದ್ರನ ಅಜ್ಞಾತ ದಕ್ಷಿಣ ಧ್ರುವದಲ್ಲಿ ಇಳಿಯುವ ಮೂಲಕ ಇತಿಹಾಸ ಸೃಷ್ಟಿಸಲು ಸಿದ್ಧವಾಗಿದೆ ಎಂದು ಹೇಳಿದೆ.

ಲ್ಯಾಂಡಿಂಗ್‌ನ ಲೈವ್ ಲಭ್ಯ: ಇಸ್ರೋದ ಲ್ಯಾಂಡಿಂಗ್ ಕಾರ್ಯಾಚರಣೆಗಳ ನೇರ ಪ್ರಸಾರ ಇಂದು ಸಂಜೆ 5:20ಕ್ಕೆ ಪ್ರಾರಂಭವಾಗುತ್ತದೆ. 5:27 ರಿಂದ ಇಸ್ರೋ ವೆಬ್‌ಸೈಟ್, ಅದರ ಯೂಟ್ಯೂಬ್ ಚಾನೆಲ್, ಫೇಸ್​ಬುಕ್​ ಮತ್ತು ಸಾರ್ವಜನಿಕ ಪ್ರಸಾರಕ ಡಿಡಿ ನ್ಯಾಷನಲ್ ಟಿವಿಯಲ್ಲಿ ಲ್ಯಾಂಡಿಂಗ್‌ನ ಲೈವ್ ಲಭ್ಯವಿರುತ್ತವೆ.

ದೇಶಾದ್ಯಂತ ಪೂಜೆ ಪ್ರಾರ್ಥನೆ: ಇಂದು ಸಂಜೆ 6.04ಕ್ಕೆ ಸಾಫ್ಟ್ ಲ್ಯಾಂಡಿಂಗ್ ಸಮಯ ನಿಗದಿಪಡಿಸಲಾಗಿದೆ. ಭಾರತದ ಈ ಐತಿಹಾಸಿಕ ಪ್ರಯತ್ನಕ್ಕೆ ವಿಶ್ವಾದ್ಯಂತ ಶುಭಾಶಯಗಳ ಮಹಾಪೂರ ಹರಿದು ಬರುತ್ತಿವೆ. ಲಂಡನ್‌ನ ಆಕ್ಸ್‌ಬ್ರಿಡ್ಜ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಸಂಶೋಧನಾ ವಿದ್ವಾಂಸರು ಚಂದ್ರಯಾನ-3 ಯಶಸ್ವಿಯಾಗಿ ಆದ್ಯ ಶಕ್ತಿ ಮಾತಾಜಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಚಂದ್ರಯಾನ-3 ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಲಿ ಎಂದು ಭಾರತೀಯ ಡಯಾಸ್ಪೊರಾ ಸದಸ್ಯರು ಯುಎಸ್‌ನ ವರ್ಜೀನಿಯಾದ ದೇವಸ್ಥಾನದಲ್ಲಿ ಹವನ ಮಾಡಿದರು. ಐತಿಹಾಸಿಕ ಕ್ಷಣಕ್ಕೆ ಮುಂಚಿತವಾಗಿ ದೇಶಾದ್ಯಂತ ಪೂಜೆ ಪ್ರಾರ್ಥನೆಗಳು ನಡೆಯುತ್ತಿವೆ. ಭಾರತದ 3ನೇ ಚಂದ್ರಯಾನದ ಐತಿಹಾಸಿಕ ಕ್ಷಣದ ಮೊದಲು ಋಷಿಕೇಶದಲ್ಲಿ ಗಂಗಾ ಆರತಿ ನಡೆಸಲಾಯಿತು.

ಭುವನೇಶ್ವರ, ವಾರಾಣಸಿ ಮತ್ತು ಪ್ರಯಾಗ್‌ರಾಜ್‌ನಲ್ಲಿ ಭಕ್ತರ ಗುಂಪು ಪೂಜೆ ಸಲ್ಲಿಸಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಯಲು ಪ್ರಾರ್ಥನೆ ಸಲ್ಲಿಸಿತು. ವಡೋದರದ ಮಕ್ಕಳು ಚಂದ್ರಯಾನ-3 ಸುರಕ್ಷಿತವಾಗಿ ಇಳಿಯಲು ಪ್ರಾರ್ಥನೆ ಸಲ್ಲಿಸಿದರು. ಲಕ್ನೋದಲ್ಲಿ, ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್‌ಗಾಗಿ ಜನರು ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾದಲ್ಲಿ ನಮಾಜ್ ಮಾಡಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮಾಹಿತಿ ಪ್ರಕಾರ, ಚಂದ್ರಯಾನ 3 ಯೋಜನೆಯ ವಿಕ್ರಮ್‌ ಲ್ಯಾಂಡರ್ ಇಂದು ಸಂಜೆ 6.04ಕ್ಕೆ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲಿದೆ. ಸಾಫ್ಟ್‌ ಲ್ಯಾಂಡಿಂಗ್‌ಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕೌತುಕದ ಕ್ಷಣವನ್ನು ಕಣ್ತುಂಬಿಕೊಳ್ಳುವುದಕ್ಕೆ ಇಡೀ ಜಗತ್ತು ಭಾರತದತ್ತ ಕಣ್ಣರಳಸಿ ಕುಳಿತಿದೆ.
Chandrayaan 3: ಯುನೈಟೆಡ್ ಸ್ಟೇಟ್ಸ್(ಅಮೆರಿಕ), ರಷ್ಯಾ ಮತ್ತು ಚೀನಾ ನಂತರ ಭಾರತ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶವಾಗಲಿದೆ. ಜತೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಭೂಮಿಯಿಂದ 3.84 ಲಕ್ಷ ಕಿ.ಮೀ ​ ದೂರ ಇರುವ ಚಂದ್ರನ ಸಮೀಪಕ್ಕೆ ತೆರಳಲು ವಿಕ್ರಮ್​ ಲ್ಯಾಂಡರ್​ 45 ದಿನಗಳ ಪ್ರಯಾಣ ಮಾಡಿದೆ. ಸದ್ಯ ವಿಕ್ರಮ್​ ಲ್ಯಾಂಡರ್ ಚಂದ್ರನಿಂದ 25 ಕಿ.ಮೀ ಎತ್ತರದಲ್ಲಿ ನಿಂತಿದೆ.