ನವದೆಹಲಿ : ದೇಶ ಮಾತ್ರವಲ್ಲದೇ ಜಗತ್ತಿನಾದ್ಯಂತ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಇನ್ನೊಂದೆಡೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಲೆಂದು ಪ್ರಪಂಚಾದ್ಯಂತ ವಿವಿಧ ಧಾರ್ಮಿಕ ಸಮುದಾಯಗಳಿಂದ ಹೋಮ, ಹವನ, ಪೂಜೆ, ಪ್ರಾರ್ಥನೆಗಳನ್ನು ಸಲ್ಲಿಕೆ ಮಾಡಲಾಗುತ್ತಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕೈಗೊಂಡಿರುವ ಅತ್ಯಂತ ಮಹತ್ವದ ಸಾಹಸಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.ಚಂದ್ರಯಾನ 3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಲೆಂದು ದೇಶ ಸೇರಿದಂತೆ ಪ್ರಪಂಚಾದ್ಯಂತ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಇನ್ನು ಗಂಗಾನದಿ ದಡದಲ್ಲಿ ಸಹ ಇಸ್ರೋದ ಸಾಧನೆ ಫಲ ನೀಡಲೆಂದು ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನೆರೆದಂತಹ ಭಕ್ತರು ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದರು. ಜೊತೆಗೆ, ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರನ್ನೂ ಸ್ಮರಿಸಲಾಯಿತು. ಭುವನೇಶ್ವರ, ವಾರಣಾಸಿ, ಪ್ರಯಾಗ್‌ರಾಜ್‌ನಲ್ಲಿ ನೂರಾರು ಮಂದಿ ಹೋಮ ಹವನ ನಡೆಸುತ್ತಿದ್ದು, ಚಂದ್ರಯಾನ 3 ಯೋಜನೆಯ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲೆಂದು ಪ್ರಾರ್ಥಿಸಲಾಯಿತು.
ಚಂದ್ರಯಾನ 3 ಮಿಷನ್ ಯಶಸ್ಸಿಯಾಗಲಿ ಎಂದು ಭಾರತಾದ್ಯಂತ ವಿವಿಧ ಧಾರ್ಮಿಕ ಸಮಾರಂಭಗಳನ್ನು ನಡೆಸಲಾಗುತ್ತಿದೆ. ಋಷಿಕೇಶದ ಪರಮಾರ್ಥ ನಿಕೇತನ ಘಾಟ್‌ನಲ್ಲಿ ಕೈಯಲ್ಲಿ ತ್ರಿವರ್ಣ ಧ್ವಜದೊಂದಿಗೆ ಗಂಗಾ ಆರತಿ ಮಾಡಲಾಯಿತು. ಆರತಿಗೂ ಮುನ್ನ ಘಾಟ್‌ನಲ್ಲಿ ಚಂದ್ರಯಾನ 3 ಯಶಸ್ಸಿಗೆ ಭಕ್ತರು ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿ ಚಿದಾನಂದ ಮುನಿ, “ವೇದದಿಂದ ಹಿಡಿದು ವಿಜ್ಞಾನದವರೆಗೆ ಜಗತ್ತು ನಮ್ಮ ದೇಶವನ್ನು ಒಪ್ಪಿಕೊಳ್ಳುತ್ತಿದ್ದು, ಭಾರತವು ದಕ್ಷಿಣ ಧ್ರುವದಲ್ಲಿ ತನ್ನ ಧ್ವಜವನ್ನು ಹಾರಿಸಲಿದೆ ಎಂಬ ಸಂಪೂರ್ಣ ನಂಬಿಕೆ ಇದೆ” ಎಂದು ಹೇಳಿದರು.
ಅಮೆರಿಕದ ವರ್ಜಿನಿಯಾದಲ್ಲಿ ಸಹ ನೂರಾರು ಭಾರತೀಯರು ದೇವಾಲಯದಲ್ಲಿ ಚಂದ್ರಯಾನ 3ರ ಯಶಸ್ಸಿಗೆ ಹವನ ಮಾಡಿದ್ದಾರೆ. ವರ್ಜೀನಿಯಾದ ದೇವಸ್ಥಾನವೊಂದರ ಅರ್ಚಕ ಸಾಯಿ ಎ.ಶರ್ಮಾ ಮಾತನಾಡಿ, ‘ಇಂದು ನಾವು ಚಂದ್ರಯಾನದ ಯಶಸ್ಸಿಗೆ ಹವನ ಮಾಡುತ್ತಿದ್ದೇವೆ. ಲಕ್ಷ್ಮೀನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ, ಮಹಾಗಣಪತಿ ಹವನವನ್ನೂ ಮಾಡುತ್ತಿದ್ದೇವೆ. ಲಕ್ಷ್ಮೀನರಸಿಂಹ ಸ್ವಾಮಿಯ ಆಶೀರ್ವಾದದಿಂದ ಇಸ್ರೋ ಕಾರ್ಯ ಯಶಸ್ವಿಯಾಗಲಿದೆ ಎಂದು ಹೇಳಿದರು
ಇನ್ನೊಂದೆಡೆ, ಚಂದ್ರಯಾನ 3 ರ ಯಶಸ್ವಿ ಲ್ಯಾಂಡಿಂಗ್ಗಾಗಿ ಮುಸ್ಲಿಂ ಸಮುದಾಯದ ನೂರಾರು ಮಂದಿ ಲಖನೌದ ಇಸ್ಲಾಮಿಕ್ ಸೆಂಟರ್ ಆಫ್ ಇಂಡಿಯಾದಲ್ಲಿ ನಮಾಜ್ ಮಾಡಿ ಪ್ರಾರ್ಥನೆ ಸಲ್ಲಿಸಿದರು. ಹಾಗೆಯೇ, ಅಲಿಗಂಜ್‌ನ ಹನುಮಾನ್ ದೇವಸ್ಥಾನದಲ್ಲಿ ಜಮಾಯಿಸಿದ ಭಕ್ತರು ಚಂದ್ರಯಾನ ಯಶಸ್ವಿಯಾಗಿ ವಿಶೇಷ ಆರತಿ ಮಾಡಿದರು. ವಡೋದರದಲ್ಲಿ ಮಕ್ಕಳ ಗುಂಪೊಂದು ಲ್ಯಾಂಡರ್ ಸುರಕ್ಷಿತವಾಗಿ ಇಳಿಯಲೆಂದು ಪ್ರಾರ್ಥನೆ ಸಲ್ಲಿಸಿತು.