ಚುನಾವಣಾ ಆಯೋಗಕ್ಕೆ ಸಚಿನ್ ತೆಂಡೂಲ್ಕರ್‌ ‘ರಾಷ್ಟ್ರೀಯ ರಾಯಭಾರಿ’ : ಮತದಾನ ಹೆಚ್ಚಿಸಲು ಕ್ರಮ

ನವದೆಹಲಿ: 2024ರಲ್ಲಿ ಲೋಕಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಸಚಿನ್​ ಮತದಾನ ಜಾಗೃತಿ ಮೂಡಿಸಲು ಕೇಂದ್ರ ಚುನಾವಣಾ ಆಯೋಗದೊಂದಿಗೆ ಕೈ ಜೋಡಿಸಿದ್ದಾರೆ. ಈ ಮೂಲಕ ಮುಂಬರುವ ಚುನಾವಣೆಯಲ್ಲಿ ದೇಶದ ನಾಗರಿಕರಿಗೆ ಮತದಾನದ ಕುರಿತು ಜಾಗೃತಿ ಮೂಡಿಸಲಿದ್ದಾರೆ. ‘ಶತಕಗಳ ಶತಕ’ ಗಳಿಸಿದ ಮಹೋನ್ನತ ದಾಖಲೆ ಹೊಂದಿರುವ ಸಚಿನ್,​ ಮುಂದಿನ ಚುನಾವಣೆಯಲ್ಲಿ ಯುವ ಮತ್ತು ಮೊದಲ ವೋಟರ್​ಗಳಿಗೆ ಸ್ಫೂರ್ತಿ ತುಂಬಲಿದ್ದಾರೆ.ಭಾರತ ಕ್ರಿಕೆಟ್​ ಇತಿಹಾಸದಲ್ಲಿ ಸಚಿನ್​ ತೆಂಡೂಲ್ಕರ್​ ಎಂಬುದೊಂದು ದೊಡ್ಡ ಅಧ್ಯಾಯ. ಕೋಟ್ಯಂತರ ಅಭಿಮಾನಿಗಳ ಕಣ್ಮಣಿ. ಸಚಿನ್ ಆಟವನ್ನು ನೋಡಿ ಬೆಳೆದವರು ಇಂದು ರಾಷ್ಟ್ರೀಯ ತಂಡದಲ್ಲಿ ಮಿಂಚುತಿದ್ದಾರೆ.ಚುನಾವಣೆಗಳಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕ್ರಿಕೆಟ್ ದಂತಕಥೆ, ಭಾರತರತ್ನ ಪ್ರಶಸ್ತಿ ಪುರಸ್ಕೃತ ಸಚಿನ್​ ತೆಂಡೂಲ್ಕರ್​ ಅವರನ್ನು ಭಾರತೀಯ ಚುನಾವಣಾ ಆಯೋಗವು ತನ್ನ ರಾಷ್ಟ್ರೀಯ ರಾಯಭಾರಿ ಎಂದು ಗುರುತಿಸಿದೆ. ದೇಶಿ ಮತ್ತು ವಿದೇಶಿ ಅಭಿಮಾನಿಗಳಿಗೂ ಇವರು​ ‘ಗಾಡ್​ ಆಫ್​ ಕ್ರಿಕೆಟ್’​. ಇದೀಗ ಸಚಿನ್​ ತಮ್ಮ ಇನ್ನೊಂದು ಮಹತ್ತರ ಜವಾಬ್ದಾರಿಯುತ ನಾಗರಿಕ ಪಾತ್ರ ನಿರ್ವಹಿಸಲು ಮುಂದಾಗಿದ್ದಾರೆ. ಭಾರತೀಯ ಚುನಾವಣಾ ಆಯೋಗವು (ಇಸಿಐ) ಮಾಸ್ಟರ್​ ಬ್ಲಾಸ್ಟರ್ ಕ್ರಿಕೆಟಿಗನನ್ನು​​ ತನ್ನ ರಾಷ್ಟ್ರೀಯ ರಾಯಭಾರಿ ಎಂದು ಗುರುತಿಸಿದೆ.

“ಕ್ರಿಕೆಟ್ ದಂತಕಥೆ ಮತ್ತು ಭಾರತ ರತ್ನ ಪ್ರಶಸ್ತಿ ಪುರಸ್ಕೃತ ಸಚಿನ್ ರಮೇಶ್ ತೆಂಡೂಲ್ಕರ್ ಅವರು ಹೊಸ ಇನ್ನಿಂಗ್ಸ್ ಅನ್ನು ‘ರಾಷ್ಟ್ರೀಯ ಐಕಾನ್’ ಆಗಿ ಪ್ರಾರಂಭಿಸಲಿದ್ದಾರೆ. ಮತದಾನದ ಕುರಿತು ಜಾಗೃತಿ ಮತ್ತು ಶಿಕ್ಷಣ ನೀಡಲಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ.

ಸಚಿನ್​ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾದರೂ ಕೆಲ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ. ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್​ನಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಟಿ20 ಪಂದ್ಯಗಳನ್ನು ಆಡುತ್ತಿದ್ದಾರೆ. ಈ ಲೀಗ್​ನಲ್ಲಿ ಭಾರತ ತಂಡದ ನಾಯಕನಾಗಿದ್ದಾರೆ. ಕಳೆದ ಬಾರಿ ಈ ಲೀಗ್​ನಲ್ಲಿ ಭಾರತ ಗೆದ್ದಿತ್ತು.

200 ಟೆಸ್ಟ್‌, 463 ಏಕದಿನ, 1 ಟಿ20 ಪಂದ್ಯಗಳನ್ನು ಸಚಿನ್​ ತೆಂಡೂಲ್ಕರ್​ ಆಡಿದ್ದಾರೆ. ಒಟ್ಟಾರೆ 664 ಪಂದ್ಯಗಳನ್ನಾಡಿರುವ ಅವರು 100 ಶತಕ ಮತ್ತು 164 ಅರ್ಧಶತಕಗಳೊಂದಿಗೆ 48.52 ರ ಸರಾಸರಿಯಲ್ಲಿ 67ಕ್ಕಿಂತ ಹೆಚ್ಚಿನ ಸ್ಟ್ರೈಕ್ ರೇಟ್‌ ಹೊಂದಿದ್ದು, 34,357 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನೂ ಹೌದು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳನ್ನು ಸಿಡಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಸಚಿನ್ ತೆಂಡೂಲ್ಕರ್ ಅವರದ್ದು. (ಎಎನ್​ಐ)

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತರಾದ ಅನುಪ್ ಚಂದ್ರ ಪಾಂಡೆ, ಅರುಣ್ ಗೋಯೆಲ್ ಅವರ ಸಮ್ಮುಖದಲ್ಲಿ ಕಳೆದ ಬುಧವಾರ ರಾಷ್ಟ್ರ ರಾಜಧಾನಿಯ ಆಕಾಶವಾಣಿಯ ರಂಗ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಚಿನ್, ಮೂರು ವರ್ಷಗಳ ಅವಧಿಗೆ ಇಸಿಐ ಜೊತೆಗಿನ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ ಎಂದು ತಿಳಿಸಿದೆ. ಭಾರತದಲ್ಲಿ ಸಚಿನ್​ ತೆಂಡೂಲ್ಕರ್​ಗೆ ಅಪಾರ ಯುವ ಅಭಿಮಾನಿಗಳಿದ್ದು, ವಿಶೇಷವಾಗಿ 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರರ ಭಾಗವಹಿಸುವಿಕೆ ಹೆಚ್ಚಿಸಲು ಈ ಒಪ್ಪಂದ ಸಹಕಾರಿಯಾಗಲಿದೆ ಎಂದು ಇಸಿಐ ಆಶಿಸಿದೆ.