ಚೆಸ್‌ ವಿಶ್ವಕಪ್‌ ಫೈನಲ್‌: ನಾಳೆ 2ನೇ ಫೈಟ್​, ಪ್ರಜ್ಞಾನಂದ vs ಕಾರ್ಲ್‌ಸನ್ ಮೊದಲ ಪಂದ್ಯ ಡ್ರಾ

ಬಾಕು (ಅಜರ್‌ಬೈಜಾನ್‌): ವಿಶ್ವದ ಅಗ್ರ ಶ್ರೇಯಾಂಕಿತ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ 35 ನಡೆಗಳ ನಂತರ ಪಂದ್ಯ ಡ್ರಾ ಕಂಡಿದೆ. ನಾಳೆ ಎರಡನೇ ಕ್ಲಾಸಿಕಲ್ ಪಂದ್ಯ ನಡೆಯಲಿದೆ. ಇದರ ಫಲಿತಾಂಶದ ಮೂಲಕ ಪಂದ್ಯ ಟೈಬ್ರೇಕರ್​ನತ್ತ ಹೋಗಲಿದೆಯೇ ಎಂಬುದು ನಿರ್ಧಾರವಾಗಲಿದೆ.ಇಲ್ಲಿ ಇಂದಿನಿಂದ ನಡೆಯುತ್ತಿರುವ ಫಿಡೆ ಚೆಸ್ ವಿಶ್ವಕಪ್ 2023ರ ಫೈನಲ್​ನ ಮೊದಲ ಪಂದ್ಯವನ್ನು ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್.ಪ್ರಜ್ಞಾನಂದ ಡ್ರಾ ಮಾಡಿಕೊಂಡಿದ್ದಾರೆ.ಅಜರ್‌ಬೈಜಾನ್​ ದೇಶದ ಬಾಕುವಿನಲ್ಲಿ ನಡೆಯುತ್ತಿರುವ ಫಿಡೆ ಚೆಸ್ ವಿಶ್ವಕಪ್‌ನಲ್ಲಿ ಆರ್.ಪ್ರಜ್ಞಾನಂದ ಮತ್ತು ಮ್ಯಾಗ್ನಸ್ ಕಾರ್ಲ್‌ಸನ್ ನಡುವಣ ಫೈನಲ್‌ನ ಮೊದಲ ಪಂದ್ಯ ಡ್ರಾ ಆಗಿದೆ.

ಸೋಮವಾರ ನಡೆದ ಸೆಮಿಫೈನಲ್‌ನ ಟೈಬ್ರೇಕರ್​ನಲ್ಲಿ ವಿಶ್ವದ ನಂಬರ್ 3ನೇ ಆಟಗಾರ ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸಿ ಪ್ರಜ್ಞಾನಂದ ಫೈನಲ್​ ಪ್ರವೇಶಿಸಿದ್ದರು. ಈ ಮೂಲಕ ಕ್ಯಾಂಡಿಡೇಟ್ಸ್​ ಟೂರ್ನಿಗೆ ಅರ್ಹತೆ ಪಡೆದುಕೊಂಡಿದ್ದರು. ಬಾಬಿ ಫಿಶರ್ ಮತ್ತು ಕಾರ್ಲ್‌ಸನ್ ನಂತರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ಗೆ ಅರ್ಹತೆ ಪಡೆದ 3ನೇ ಕಿರಿಯ ಆಟಗಾರ ಎಂಬ ಖ್ಯಾತಿಯನ್ನು ಆರ್.ಪ್ರಜ್ಞಾನಂದ ಗಳಿಸಿದ್ದಾರೆ.

ಟೈ ಸಂಭವಿಸಿದರೆ, ಸುತ್ತಿನ ಮೂರನೇ ದಿನದಂದು ಪ್ಲೇಆಫ್ ಸಂಭವಿಸುತ್ತದೆ. ಟೈಬ್ರೇಕ್ ಪ್ರಕ್ರಿಯೆಯು ಎರಡು ಕ್ಷಿಪ್ರ ಆಟಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ 25 ನಿಮಿಷಗಳ ಸಮಯದ ನಿಯಂತ್ರಣ ಮತ್ತು ಹೆಚ್ಚು ಅಗತ್ಯಬಿದ್ದಲ್ಲಿ 10 ನಿಮಿಷಗಳ ಸಮಯ ನಿಯಂತ್ರಣದೊಂದಿಗೆ ಎರಡು ಆಟಗಳನ್ನು ಆಡಿಸಲಾಗುತ್ತದೆ. ಪಂದ್ಯದ ಸ್ವರೂಪ: ಮೊದಲು ಎರಡು ಪಂದ್ಯಗಳು ನಡೆಯುತ್ತವೆ. ಇಂದಿನದು ಮೊದಲ ಪಂದ್ಯ. ಪ್ರತಿಯೊಂದು ಪಂದ್ಯವು ಆರಂಭಿಕ 40 ಚಲನೆಗಳಿಗೆ 90 ನಿಮಿಷಗಳ ಸಮಯದ ನಿಯಂತ್ರಣ ಹೊಂದಿರುತ್ತದೆ. ಮುಂದಿನ 40 ಚಲನೆಗಳಿಗೆ 30 ನಿಮಿಷಗಳನ್ನು ಸೇರಿಸಲಾಗುತ್ತದೆ. ಈ ಸಮಯದ ಲೆಕ್ಕಾಚಾರ ಮೊದಲ ಚಲನೆಯಿಂದ ಆರಂಭವಾಗುತ್ತದೆ.